ಕುಂದಾಪುರ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಗುರುವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಸಿದ್ದಾಪುರ ಸಮೀಪದ ಹೆನ್ನಾಬೈಲಿನ ಉರಪಾಲ್ ಎಂಬಲ್ಲಿ ಇಲಾಖೆಯ ಅರವಳಿಕೆ ತಜ್ಞರು ನೀಡಿದ್ದ ಅರವಳಿಕೆ ಮದ್ದಿಗೆ ಸ್ಪಂದಿಸಿರುವ ಗಜರಾಜ ಧರಾಶಾಹಿಯಾಗಿದೆ. ಬಳಿಕ ಆರು ಆನೆಗಳ ಸಹಕಾರದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ.
ಮಂಗಳವಾರ ಸಂಜೆಯ ಬಳಿಕ ಬಾಳೆಬರೆ-ಸಿದ್ದಾಪುರ ಮಾರ್ಗವಾಗಿ ಘಾಟಿಯಿಂದ ಕೆಳಕ್ಕೆ ಬಂದಿದ್ದ ಕಾಡಾನೆಯ ಚಲನವಲನಗಳನ್ನು ರೆಡಿಯೋ ಕಾಲರ್ ಹಾಗೂ ಜಿಪಿಎಸ್ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯತಂತ್ರವನ್ನು ರೂಪಿಸಿದ್ದರು.
ಒಂಟಿ ಸಲಗನನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಾಚರಣೆಯ ಮೊದಲ ಭಾಗವಾಗಿ ಅರವಳಿಕೆ ತಜ್ಞರನ್ನು ಹಾಗೂ ಮೂರು ಪಳಗಿದ ಆನೆಗಳನ್ನು ಸಕ್ರೆಬೈಲು ಆನೆ ಬಿಡಾರದಿಂದ ತರಿಸಲಾಗಿತ್ತು. ಸಿದ್ದಾಪುರದಿಂದ ಹೆನ್ನಾಬೈಲ್ ಮೂಲಕ ಗೆದ್ದೋಡಿಗೆ ಸಾಗುವ ದಾರಿಯನ್ನು ಸಾರ್ವಜನಿಕ ಪ್ರವೇಶ ನಿರ್ಬಂಧ ಮಾಡಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಕಾಡಾನೆಯಿಂದ ಯಾರಿಗೂ ತೊಂದರೆಯಾಗದಂತೆ ಹಲವಾರು ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.



















