ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಎಂದು ಕರೆಯುವ ಸಾಂಪ್ರದಾಯಿಕ ಕ್ರೀಡೆ ನೋಡುತ್ತಿದ್ದ ಸಂದರ್ಭದಲ್ಲಿ ಯುವಕನ ಎದೆಗೆ ಗೂಳಿ ತಿವಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
28 ವರ್ಷದ ಯುವಕನತ್ತ ಬಂದ ಗೂಳಿ ತನ್ನ ಕೊಂಬುಗಳಿಂದ ಆತನ ಎದೆಯನ್ನು ಇರಿದಿದೆ. ಇದರಿಂದಾಗಿ ಕೆಳಗೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಎದೆಗೆ ಇರಿದು ತೀವ್ರವಾದ ಗಾಯಗಳಾಗಿದ್ದರಿಂದ ಆ ಯುವಕ ಸಾವನ್ನಪ್ಪಿದ್ದಾನೆ.
ತಮಿಳುನಾಡಿನ ಶಿವಗಂಗೆಯ ಕಾರೈಕುಡಿಯಲ್ಲಿ ಭಾನುವಾರ ಆಯೋಜಿಸಿದ್ದ ಗೂಳಿ ಪಳಗಿಸುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂದರ್ಭದಲ್ಲ ಹಲವು ಗೂಳಿಗಳು ಭಾಗವಹಿಸಿದ್ದವು. ಪ್ರತಿ ಗೂಳಿಯನ್ನು ಸುಮಾರು 30 ನಿಮಿಷಗಳ ಕಾಲ ಬಿಡಲಾಗಿತ್ತು. 9 ಜನರು ಅದನ್ನು ಪಳಗಿಸಲು ಪ್ರಯತ್ನಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಧುರೈ, ತಿರುಚ್ಚಿ, ರಾಮನಾಥಪುರಂ, ಪುದುಕೊಟ್ಟೈ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು.
ಕಾರ್ಯಕ್ರಮದ ನಾಲ್ಕನೇ ಸುತ್ತಿನ ಸಮಯದಲ್ಲಿ, ಸೇಲಂನ ಕಾರ್ತಿಕ್ ಎಂಬ ಯುವಕ ತನ್ನ ಕಡೆಗೆ ಬರುತ್ತಿದ್ದ ಗೂಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅದು ಅವನ ಎದೆಯ ಮೇಲೆ ತನ್ನ ಕೊಂಬುಗಳಿಂದ ಇರಿದಿದೆ. ನಂತರ ಅವನು ನೆಲದ ಮೇಲೆ ಕುಸಿದಿದ್ದಾನೆ. ಹೀಗಾಗಿ ಕಾರ್ಯಕ್ರಮವನ್ನು ಮದ್ಯದಲ್ಲಿಯೇ ನಿಲ್ಲಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.