ಸಿಲಿಕಾನ್ ಸಿಟಿ ನಂದಿದುರ್ಗದ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬುಧವಾರ ನಡೆದಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮರ ಬಿದ್ದು ಗಾಯಗೊಂಡಿರುವ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಾಲಕನ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು ಎಂದಿದ್ದಾರೆ.
ಒಣಗಿದ ಮರ ತೆರವಿಗೆ ಇನ್ನೂ ಮೀನಾಮೇಷ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮರ ತೆರವಿಗೆ ಕೆಲವೆಡೆ ವಿರೋಧ ಎದುರಾಗುತ್ತಿದೆ. ಕೆಲವೆಡೆ ಮರಗಳು ಚೆನ್ನಾಗಿ ಇರುವಂತೆಯೇ ಕಾಣುತ್ತವೆ. ಆದರೆ, ಬುಡದಲ್ಲಿ ಕಾಂಕ್ರೀಟ್ ಇರುವುದರಿಂದ ಅವು ಬೀಳುತ್ತಿವೆ. ಇಂತಹ ಮರಗಳನ್ನು ಗುರುತಿಸಿದ್ದೇವೆ ಎಂದು ಹೇಳಿದ್ದಾರೆ.
ಕೋವಿಡ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಕಲ್ ಡಿ ಕುನ್ಹ ವರದಿಯಂತೆ ನೋಟಿಸ್ ನೀಡವ ವಿಚಾರವಾಗಿ ಪ್ರತಿಕ್ರಿಯಿಸಿ, ಅಧಿಕಾರಿಗಳಿಗೆ ನೋಟಿಸ್ ನೀಡುವ ಚಿಂತನೆ ನಡೆದಿದೆ. ಈ ಕುರಿತು ಮಾಧ್ಯಮಗಳ ಮುಂದೆ ಹೇಳಲು ಬರುವುದಿಲ್ಲ ಎಂದಿದ್ದಾರೆ.