ಮೈಸೂರು: ಮೊದಲ ಮದುವೆಯ ವಿಷಯ ಮುಚ್ಚಿಟ್ಟಿದ್ದ ವ್ಯಕ್ತಿಯ ಮುಖವಾಡ ಬಯಲಾಗಿ ಹಾದಿ ರಂಪಾಟವಾಗಿರುವ ಘಟನೆಯೊಂದು ನಡೆದಿದೆ.
ಮೈಸೂರಿನ ಜೆಪಿ ನಗರದಲ್ಲಿ ಈ ಘಟನೆ ನಡೆದಿದೆ. ಪತಿ ಶಿವಕುಮಾರ್ ಮದುವೆಯಾಗಿ ಡಿವೋರ್ಸ್ ಆಗಿದ್ದ ಮಾಜಿ ಪತ್ನಿಯೊಂದಿಗೆ ಯಾರಿಗೂ ಗೊತ್ತಿಲ್ಲದಂತೆ ಮತ್ತೊಮ್ಮೆ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಎರಡನೇ ಪತ್ನಿ ಶೋಭಾ ದೂರು ನೀಡಿದ್ದಾರೆ.

ಶೋಭಾಳನ್ನು ಮದುವೆ ಆಗುವ ಮುನ್ನವೇ ಮತ್ತೊಂದು ಮದುವೆ ಆಗಿದ್ದ ಶಿವಕುಮಾರ್ 2021ರಲ್ಲಿ ಡಿವೋರ್ಸ್ ನೀಡಿದ್ದ ಎನ್ನಲಾಗಿದೆ. ನಂಜನಗೂಡು ತಾಲೂಕಿನ ಲಾವಣ್ಯ ಎಂಬ ಯುವತಿಯ ಜೊತೆ 2020ರಲ್ಲಿ ಮದುವೆಯಾಗಿದ್ದ ಶಿವಕುಮಾರ್ 2021ರಲ್ಲಿ ಡಿವೋರ್ಸ್ ಪಡೆದಿದ್ದ. ಆನಂತರ ಹಾಸನ ಜಿಲ್ಲೆಯ ಚನ್ನರಾಯನ ಪಟ್ಟಣದ ಯುವತಿ ಶೋಭಾ ಜೊತೆ 2022ರಲ್ಲಿ ಮದುವೆಯಾಗಿದ್ದ.

ಆದರೆ, ಮೊದಲ ಪತ್ನಿ ಲಾವಣ್ಯ ಗರ್ಭಿಣಿಯಾಗಿದ್ದು, ಯಾರಿಗೂ ಗೊತ್ತಿಲ್ಲದಂತೆ ರಿಜಿಸ್ಟರ್ ಮದುವೆಯಾಗಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಶೋಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2ನೇ ಹೆಂಡತಿ ಶೋಭಾಳಿಗೆ ವಿಚಾರ ತಿಳಿಯುತ್ತಿದ್ದಂತೆ ಮೈಸೂರಿನ ಜೆಪಿ ನಗರದಲ್ಲಿರುವ ಸ್ವಂತ ನಿವಾಸಕ್ಕೆ ಲಾವಣ್ಯಳನ್ನು ಶಿವಕುಮಾರ್ ಕರೆದುಕೊಂಡು ಬಂದಿದ್ದಾನೆ.

ಇದನ್ನು ಪ್ರಶ್ನಿಸಿದ್ದ ಶೋಭಾ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಶೋಭಾ ಅವರಿಗೆ 2 ವರ್ಷದ ಗಂಡು ಮಗು, ಲಾವಣ್ಯ ಅವರಿಗೆ ಒಂದು ಹೆಣ್ಣು ಮಗು ಇದ್ದು, ಈಗ ಶೋಭಾ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.