ಧಾರವಾಡ : ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವಿರೋಧವಾಗಿ ಆಯ್ಕೆಯಾದರು.
ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ವೀರಶೈವ ಧರ್ಮದ ಪಂಚಪೀಠಗಳ ಎಲ್ಲಾ ಶಾಖಾಮಠಗಳ ಶಿವಾಚಾರ್ಯ ಶ್ರೀಗಳ ಪ್ರಥಮ ಸಮಾವೇಶದಲ್ಲಿ ಈ ಆಯ್ಕೆ ನಡೆಯಿತು.
ಸುಳ್ಳ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ನವಲಗುಂದ ಪಂಚಗೃಹ ಹಿರೇಮಠದ ಶ್ರೀಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹುಬ್ಬಳ್ಳಿ ನವನಗರ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ (ಎಲ್ಲರೂ ಉಪಾಧ್ಯಕ್ಷರು), ಬ್ಯಾಹಟ್ಟಿ ಹಿರೇಮಠದ ಶ್ರೀಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಮತ್ತು ಮೊರಬ ಜಡಿಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ (ಇಬ್ಬರೂ ಜಂಟಿ ಕಾರ್ಯದರ್ಶಿಗಳು), ಕೋಶಾಧ್ಯಕ್ಷರಾಗಿ ತುಪ್ಪದಕುರಹಟ್ಟಿ ಹಿರೇಮಠದ ಶ್ರೀವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾರ್ಯಕಾರಿಣಿ ಸದಸ್ಯರುಗಳಾಗಿ ಕುಂದಗೋಳ ಪಂಚಗೃಹ ಹಿರೇಮಠದ ಶ್ರೀಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿಂಗನಹಳ್ಳಿಯ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ
ಕಲಘಟಗಿ ಹನ್ನೆರಡುಮಠದ ಶ್ರೀಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮೀಜಿ, ಹಳ್ಯಾಳ-ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ಶ್ರೀರೇಣುಕ ಪ್ರಸಾದ ಸ್ವಾಮೀಜಿ, ತಿರುಮಲಕೊಪ್ಪ ಶ್ರೀಜಗದ್ಗುರು ರೇಣುಕ ಧರ್ಮನಿವಾಸದ ಶ್ರೀದಾನೇಶ್ವರ ಸ್ವಾಮೀಜಿ ಆಯ್ಕೆಯಾದರು.
ಧರ್ಮಧ್ವಜ ಪ್ರದಾನ : ಅ.ಭಾ. ವೀರಶೈವ ಶಿವಾಚಾರ್ಯ ಸಂಸ್ಥೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶಿರಕೋಳದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯರಿಗೆ ರಾಷ್ಟ್ರೀಯ ಉಪಾಧ್ಯಕ್ಷರಾದ ಹುಕ್ಕೇರಿಯ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಂಚಾಚಾರ್ಯರ ಧರ್ಮಧ್ವಜವನ್ನು ನೀಡಿ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲಾ ಶ್ರೀಗಳನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಹುಕ್ಕೇರಿ ಶ್ರೀಗಳನ್ನು ಹಾಗೂ ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಉಭಯ ಶ್ರೀಗಳು ಗೌರವಿಸಿದರು. ಕಲಘಟಗಿ ಹನ್ನೆರಡುಮಠದ ಶ್ರೀರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಸಮಾವೇಶದ ನಿರ್ಣಯಗಳು :
ಶಿವಾಚಾರ್ಯ ಶ್ರೀಗಳ ಪ್ರಥಮ ಸಮಾವೇಶದಲ್ಲಿ ಕೈಕೊಂಡ ನಿರ್ಣಯಗಳು ಹೀಗಿವೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಮೂಲವಾಹಿನಿಯನ್ನು ಕೇಂದ್ರೀಕರಿಸಿ ವೀರಶೈವ-ಲಿಂಗಾಯತ ಧರ್ಮ ಜಾಗೃತಿಗೆ ವಿಸ್ತೃತ ಅಭಿಯಾನಗಳನ್ನು ಕೈಕೊಳ್ಳುವುದು, ವೀರಶೈವ ಧರ್ಮ ಸಂಸ್ಥಾಪನೆಯ ಪಂಚಪೀಠಗಳಾದ ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶ್ರೀಶೈಲ ಹಾಗೂ ಶ್ರೀಕಾಶಿ ಪೀಠಗಳ ಪ್ರಾಚೀನ ಮೂಲ ಗುರುಪರಂಪರೆಯನ್ನು ವ್ಯವಸ್ಥಿತವಾಗಿ ಪ್ರಚುರಪಡಿಸುವುದು, ಬಸವಾದಿ ಶಿವಶರಣರು ಹಾಗೂ ಅ.ಭಾ.ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕರಾದ ಹಾನಗಲ್ಲದ ಶ್ರೀಕುಮಾರ ಮಹಾಸ್ವಾಮಿಗಳು ನಿರೂಪಿಸಿದ ಚಿಂತನೆಗಳನ್ನೂ ಭಕ್ತಗಣಕ್ಕೆ ತಿಳಿಸುವುದು, ಕನಿಷ್ಠ ಪ್ರತೀ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲಾ ಶಿವಾಚಾರ್ಯರು ಸಮಾವೇಶಗೊಂಡು ಧರ್ಮ ಜಾಗೃತಿ ಚಿಂತನೆಗೈದು ಅನುಷ್ಠಾನಗೊಳಿಸುವುದು, ಹು.ಧಾ. ಮಹಾನಗರ ಸೇರಿ ಎಲ್ಲಾ ತಾಲ್ಲೂಕು ಕೇಂದ್ರ ಸ್ಥಾನಗಳು, ಹೋಬಳಿ ಮತ್ತು ದೊಡ್ಡ ಗ್ರಾಮಗಳಲ್ಲಿ ಹಂತ ಹಂತವಾಗಿ ವರ್ಷದುದ್ದಕ್ಕೂ ಧರ್ಮ ಜಾಗೃತಿ ಸಮಾವೇಶಗಳನ್ನು ಸಂಘಟಿಸುವುದು ಮತ್ತು ಸಾಂದರ್ಭಿಕವಾಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜಾ ಕೈಂಕರ್ಯಗಳನ್ನು ಸಂಘಟಿಸಿ ಇಷ್ಟಲಿಂಗ ದೀಕ್ಷೆ ನೀಡುವುದು.