ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಾರದ ವೇದಿಕೆಯಲ್ಲಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಈ ಮೂಲಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗೆ ಎಲಾನ್ ಮಸ್ಕ್ ಬೆಂಬಲ ಸೂಚಿಸಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಮೇಲೆ ದಾಳಿ ನಡೆದ ಸ್ಥಳದಲ್ಲೇ ಈಗ ಮತ್ತೊಮ್ಮೆ ಪ್ರಚಾರ ಸಭೆ ನಡೆದಿದೆ. ಕಪ್ಪು ಬಣ್ಣದ ‘ಮೇಕ್ ಅಮೆರಿಕಾ ಗ್ರೇಟ್ ಅಗೇನ್ (ಎಂಎಜಿಎ) ಟೊಪ್ಪಿ ಧರಿಸಿದ್ದ ಮಸ್ಕ್, ಟ್ರಂಪ್ ಅವರು ವೇದಿಕೆ ಮೇಲೆ ಭಾಷಣ ಮಾಡುವಾಗ ಅವರ ಹಿಂಭಾಗದಲ್ಲಿ ಮೇಲೆ ಕೆಳಗೆ ಜಿಗಿದು ಟ್ರಂಪ್ ಬೆಂಬಲಿಗರ ಉತ್ಸಾಹ ಹೆಚ್ಚಿಸಿದರು.
ಈ ವೇಳೆ ಮಾತನಾಡಿರುವ ಮಸ್ಕ್, ಟ್ರಂಪ್ ಅವರಿಗೆ ಮತ ಹಾಕುವುದಕ್ಕಿಂತ ಮುಖ್ಯವಾದ ಸಂಗತಿ ಬೇರೆ ಯಾವುದೂ ಇಲ್ಲ. ಒಂದು ವೇಳೆ ಟ್ರಂಪ್ ಗೆಲ್ಲದೆ ಹೋದರೆ, ಅಮೆರಿಕಕ್ಕೆ ಇದೇ ಕೊನೆಯ ಚುನಾವಣೆಯಾಗಲಿದೆ. ಡೆಮಾಕ್ರಟಿಕ್ ಪಕ್ಷವು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಸ್ತ್ರಾಸ್ತ್ರ ಹಕ್ಕು ಸೇರಿದಂತೆ ಅಮೆರಿಕನ್ನರ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ ಎಂದು ಆರೋಪಿಸಿದ್ದಾರೆ.