ಇಸ್ರೇಲ್ ದಾಳಿ ಗಾಜಾದ ಮೇಲೆ ಮುಂದುವರೆದಿದ್ದು, ಅಲ್ಲಿನ ಮಸೀದಿ ಹಾಗೂ ಶಾಲೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. ಪರಿಣಾಮವಾಗಿ 18ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.
ಗಾಜಾಪಟ್ಟಿ ಪ್ರದೇಶದಿಂದ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಮಸೀದಿ ಹಾಗೂ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅಲ್ಲದೇ, ಘಟನೆಯಲ್ಲಿ 93 ಜನರು ಗಾಯಗೊಂಡಿದ್ದಾರೆ. 2023ರಲ್ಲಿ ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಬಲಿ ಪಡೆದಿತ್ತು. ಅದರ ಬೆನ್ನಲ್ಲೇ ಪ್ರತೀಕಾರಕ್ಕಾಗಿ ಇಸ್ರೇಲ್ ದಾಳಿ ಮುಂದುವರೆಸಿದೆ.
ಇಸ್ರೇಲ್‌ನ ಮಿಲಿಟರಿ ದಾಳಿಯು ಸುಮಾರು 42 ಸಾವಿರ ಪ್ಯಾಲೆಸ್ಟೀನಿಯನ್ನರನ್ನು ಬಲಿ ಪಡೆದಿದೆ. ಹೀಗಾಗಿ ಇಸ್ರೇಲ್ ಹಾಗೂ ಪ್ರಾಚ್ಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಲೆಬನಾನ್ ಮತ್ತು ಗಾಜಾ ಪಟ್ಟಿಯ ಮೇಲೆ ಗುರುವಾರ ಇಸ್ರೇಲ್ ಮುಗಿಬಿದ್ದಿದೆ. ಬೈರೂತ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, 40ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಇರಾನ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ದಾಳಿ ನಡೆಸಿದ್ದು, ಲೆಬನಾನ್ ಹಾಗೂ ಗಾಜಾ ಪಟ್ಟಿಯ ಮೇಲೆ ಬಾಂಬ್ ಸುರಿಮಳೆ ಮಾಡಿದೆ. ಇಸ್ರೇಲ್ ನಡೆಸಿರುವ ದಾಳಿಯಿಂದಾಗಿ ಸುಮಾರು 12 ಲಕ್ಷ ಜನರನ್ನು ಲೆಬನಾನ್ ನಿಂದ ಸ್ಥಳಾಂತರಿಸಲಾಗಿದೆ ಎಂದು ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.
ಗಾಜಾ ಪಟ್ಟಿಯಲ್ಲಿ ಅಡಗಿಕೊಂಡಿರುವ ಹಮಾಸ್ ನಾಯಕರನ್ನು ಗುರಿ ಯಾಗಿಸಿ ಇಸ್ರೇಲ್ ವಾಯುದಾಳಿ ನಡೆಸಿದ್ದು, ಗಾಜಾ ಸರಕಾರದ ಮುಖ್ಯಸ್ಥ ರಾವಿ ಮುಷ್ತಾಹ ಹಾಗೂ ಇತರ ನಾಯಕರು ಹತ್ಯೆಯಾಗಿದ್ದಾರೆ.