ಬೆಂಗಳೂರು: ಬಂಗಾಳಕೊಲ್ಲಿಯಲ್ಲಿನ ಟರ್ಫ್ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಂತೂ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆರಾಯನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಮಳೆಯ ಆರ್ಭಟಕ್ಕೆ ರಾಜಧಾನಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಶನಿವಾರ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ. ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ ಗೆ ನೀರು ನುಗ್ಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದ್ದು, ಜನಜೀವನ ತತ್ತರಿಸಿ ಹೋಗಿದೆ.
ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್ ಗಳಿದ್ದು, 2 ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಹಾಕಿದೆ. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ. ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ನಲ್ಲಿ 80ಕ್ಕೂ ಅಧಿಕ ಕಾರು, ನೂರಕ್ಕೂ ಹೆಚ್ಚು ಬೈಕ್ ಗಳು ಸಿಲುಕಿವೆ.
ಮಹಾ ಮಳೆಯಿಂದ ಬಸವೇಶ್ವರ ನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. 15ಕ್ಕೂ ಅಧಿಕ ವೃದ್ಧರು ಸಂಕಷ್ಟ ಪಡುವಂತಾಗಿದೆ. ಬಸವೇಶ್ವರ ನಗರದ 8 ಬಿ ಮುಖ್ಯರಸ್ತೆ ಹೊಳೆಯಂತೆ ನೀರು ಹರಿದಿದೆ.
ಬಿನ್ನಿಪೇಟೆಯಲ್ಲಿನ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. 15 ಮನೆ ನಿವಾಸಿಗಳು ಹೊರಗೆ ಬಾರದ ಸ್ಥಿತಿಯಲ್ಲಿ ಸಿಲುಕಿದರು. ಬೈಕ್ ಗಳು ಜಖಂ ಆಗಿವೆ. ಯಲಹಂಕದ ಅಟ್ಟೂರಿನಲ್ಲಿ ಮಳೆ ಅಬ್ಬರಿಸಿದೆ. ಟಿ.ದಾಸರಹಳ್ಳಿಯ ಮಹೇಶ್ವರಿನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಸರ್ಜಾಪುರ ಮುಖ್ಯರಸ್ತೆ ಕೆರೆಯಂತಾಗಿದೆ. ರಾಜಾಜಿನಗರದಲ್ಲೂ ಮಳೆ ಧಾರಾಕಾರವಾಗಿ ಸುರಿದಿದೆ. ಬೆಂಗಳೂರಿನ ಕೊಟ್ಟೆಗೆಪಾಳ್ಯ ; 113 ಮಿ.ಮೀ, ಹಂಪಿನಗರ : 108 ಮಿ.ಮೀ, ನಾಗಪುರ : 107.5 ಮಿ.ಮೀ, ಚೌಡೇಶ್ವರಿ : 79.5 ಮಿ.ಮೀ, ಮಾರುತಿಮಂದಿರ : 75.5 ಮಿ.ಮೀ, ನಂದಿನಿ ಲೇಔಟ್ : 71.5 ಮಿ.ಮೀ, ರಾಜಾಜಿನಗರ : 59 ಮಿ.ಮೀ, ನಾಯಂಡಹಳ್ಳಿ : 46 ಮಿ.ಮೀ, HAL ಏರ್ಪೋರ್ಟ್ : 45 ಮಿ.ಮೀ, ವಿದ್ಯಾರಣ್ಯಪುರ : 45 ಮಿ.ಮೀ, ಪುಟ್ಟೇನಹಳ್ಳಿ : 42.5 ಮಿ.ಮೀ, RR ನಗರ : 42.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ : 42.5 ಮಿ.ಮೀ, ಸೇರಿದಂತೆ ಸರಾಸರಿ 36 ಮಿ.ಮೀ ಮಳೆ ದಾಖಲಾಗಿದೆ.