ತೆಲುಗಿನ ಹಾಸ್ಯನಟ ರಾಜೇಂದ್ರ ಪ್ರಸಾದ್ ಅವರ ಮಗಳು ಗಾಯತ್ರಿ (38) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಗಾಯತ್ರಿ ಅವರಿಗೆ ಶುಕ್ರವಾರ ಹೃದಯಾಘಾತವಾಗಿತ್ತು. ಕೂಡಲೇ ಕುಟುಂಬಸ್ಥರು ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಮಗಳ ಸಾವಿನಿಂದಾಗಿ ನಟ ರಾಜೇಂದ್ರ ಪ್ರಸಾದ್ ಮನೆಯಲ್ಲಿ ಶೋಕ ಮಡುಗಟ್ಟಿದೆ. ಸೆಲೆಬ್ರಿಟಿಗಳು, ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಗಾಯತ್ರಿ ಅವರಿಗೆ ಹೃದಯಘಾತ ಆಗುವಾಗ ರಾಜೇಂದ್ರ ಪ್ರಸಾದ್ ಅವರು ಶೂಟಿಂಗ್ ನಲ್ಲಿ ಇದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ಗಾಯತ್ರಿ ಅವರ ಅಂತಿಮ ಸಂಸ್ಕಾರ ಶನಿವಾರ ನಡೆಯಲಿದೆ.
ರಾಜೇಂದ್ರ ಪ್ರಸಾದ್ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ವರ್ಷಗಳು ಕಳೆದಂತೆ ಅವರಿಗೆ ಬೇಡಿಕೆ ಹೆಚ್ಚಾಯಿತು. ಟಾಲಿವುಡ್ ನಲ್ಲಿ ಈಗ ಹಾಸ್ಯ ನಟರಾಗಿ ಮಿಂಚುತ್ತಿದ್ದಾರೆ. ಅವರ ಕುಟುಂಬದಿಂದ ಯಾರೂ ಇಂಡಸ್ಟ್ರಿಗೆ ಬಂದಿಲ್ಲ. ಕೆಲವು ವರ್ಷಗಳ ಹಿಂದೆ ಮಗಳ ಬಗ್ಗೆ ಮಾತನಾಡಿ, ರಾಜೇಂದ್ರ ಪ್ರಸಾದ್ ಭಾವುಕರಾಗಿದ್ದರು.