ಚಿತ್ರದುರ್ಗ: ದಸರಾ ಹಬ್ಬವನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬಳಸಿಕೊಂಡಿದೆ. ಹೀಗಾಗಿ ಆ ಚಾಮುಂಡಿ ತಾಯಿಯೇ ಅವರಿಗೆ ತಕ್ಕ ಶಿಕ್ಷೆ ಕೊಡ್ತಾಳೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನಾ ಸಮಾರಂಭದಲ್ಲಿ ಚಾಮುಂಡೇಶ್ವರಿ ತಾಯಿಯ ವೈಭವಕ್ಕಿಂತ ರಾಜಕೀಯ ವೈಭವೀಕರಣವೇ ಹೆಚ್ಚು ಕಾಣಿಸಿತು. ಈ ಮೂಲಕ ಕಾಂಗ್ರೆಸ್ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡಿದೆ. ದಸರಾದಲ್ಲಿ ಚಾಮುಂಡೇಶ್ವರಿ ತಾಯಿಯ ವೈಭವೀಕರಣ ಮಾಡಬೇಕಿತ್ತು. ಆದರೆ, ಕೇಂದ್ರ ಟೀಕಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿ ನಾವು ಸರ್ಕಾರವನ್ನು ಬೀಳಿಸುವುದಿಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿ ಅದೇ ಬೀಳಲಿದೆ ಎಂದಿದ್ದಾರೆ.
ಸಿದ್ದರಾಮಯ್ಯಗೆ ನಾವು ವಿರೋಧಿಗಳಲ್ಲ. ಅವರ ಪಕ್ಷದಲ್ಲಿದ್ದವರೇ ವಿರೋಧಿಗಳು. ಅಲ್ಲಿದ್ದವರೇ ಅವರನ್ನು ಬೀಳಿಸಲು ಯತ್ನಿಸುತ್ತಿದ್ದಾರೆ. ಅವರ ಪಾರ್ಟಿಯಲ್ಲಿದ್ದವರು ದಾಖಲೆಗಳನ್ನು ತಂದು ವಿರೋಧ ಪಕ್ಷದವರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್ ನವರೇ ಪ್ರಜಾಪ್ರಭುತ್ವದ ವಿರೋಧಿಗಳು. ಮುಡಾದಲ್ಲಿ ದೊಡ್ಡ ಹಗರಣವಾಗಿದೆ. ಸಿಎಂ ತಮ್ಮ ಪ್ರಭಾವ ಬಳಸಿ ಹಗರಣ ಮಾಡಿದ್ದಾರೆ. ನಾವು ಅವರು ರಾಜೀನಾಮೆ ನೀಡುವವರೆಗೂ ಬಿಡುವುದಿಲ್ಲ ಎಂದಿದ್ದಾರೆ.