ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ 50 ಕೋಟಿ ರೂ. ಬೇಡಿಕೆಯೊಂದಿಗೆ ಜೀವ ಬೆದರಿಕೆ ಹಾಕಿದ ಆರೋಪ ಮಾಡಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ಈಗ ಪ್ರತಿ ದೂರು ದಾಖಲಾಗಿದೆ.
ವಿಧಾನ ಪರಿಷತ್ ಜೆಡಿಎಸ್ ಮಾಜಿ ಸದಸ್ಯ ರಮೇಶಗೌಡ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಆತನೇ ನೂರು ಕೋಟಿ ರೂ. ಹಣ ಕೇಳಿದ್ದ. ಇಲ್ಲ ಅಂದಿದ್ದಕ್ಕೆ ಆ. 24ರಂದು ಮನೆಗೆ ಊಟಕ್ಕೆ ಕರೆದು ಬೆದರಿಕೆ ಹಾಕಿದ್ದಾರೆ. ನಾನು ಈಗಾಗಲೇ ಲಾಸ್ ನಲ್ಲಿದ್ದೇನೆ. ನನಗೆ ಹಣ ಬೇಕು. ನೀವು ನೂರು ಕೋಟಿ ರೂ. ಕೊಡಿ, ಇಲ್ಲವಾದರೆ ನಿಮ್ಮನ್ನ ಮತ್ತು ಹೆಚ್.ಡಿ. ಕುಮಾರಸ್ವಾಮಿಯನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ನೀಡಿರುವ ವಿಜಯ್ ಟಾಟಾ, ಹೊರಗಿನವರಲ್ಲ. 2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ವಿಪ ಸದಸ್ಯ ರಮೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಸದ್ಯ ದೂರಿನ ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ವಿಜಯ್ ಟಾಟಾ ಆರೋಪದ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೆಂಡವಾಗಿದ್ದಾರೆ. ‘ಬೀದಿ ನಾಯಿ, ನರಿಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ? ಎಂದು ಕಿಡಿಕಾರಿದ್ದಾರೆ.