ಮೈಸೂರು: ಇಂದಿನಿಂದ ವಿಶ್ವವಿಖ್ಯಾತ ದಸರಾ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ‘ಸಾಂಸ್ಕೃತಿಕ ನಗರಿ’ ಮೈಸೂರು ನವವಧುವಿನಂತೆ ಶೃಂಗಾರಗೊಂಡಿದೆ.
ಬರೋಬ್ಬರಿ 12 ವೇದಿಕೆಗಳಲ್ಲಿ ನಡೆಯುವ ಕಾರ‍್ಯಕ್ರಮಕ್ಕೆ ಇಂದು ಚಾಲನೆ ಸಿಗಲಿದೆ. ನವರಾತ್ರಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು, ಸಾರ್ವಜನಿಕರು ಉತ್ಸುಕರಾಗಿದ್ದು, ಅರಮನೆ ನಗರಿ ಮೈಸೂರು ದೀಪಾಲಂಕಾರಗಳಿಂದ ಸಿಂಗಾರಗೊಂಡಿದೆ. ಈ ಮೂಲಕ ಜನರನ್ನು ಆಕರ್ಷಿಸುತ್ತಿದೆ.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅ. 3ರಿಂದ 12ರ ವರೆಗೆ 10 ದಿನ ನಗರದಲ್ಲಿ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟು 21 ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಪೈಕಿ 11 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ 508 ಕಲಾ ತಂಡಗಳ 6500 ಕಲಾವಿದರು ಅರಮನೆ ಸೇರಿದಂತೆ 11 ವೇದಿಕೆಗಳಲ್ಲಿ ತಮ್ಮ ಕಲೆಯ ಪ್ರದರ್ಶನ ನಡೆಸಲಿದ್ದಾರೆ.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಚಲನಚಿತ್ರೋತ್ಸವ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್) ನಲ್ಲಿ ಫಲಪುಷ್ಪ ಪ್ರದರ್ಶನ, ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿಗೆ ಚಾಲನೆ ಸಿಗಲಿದೆ. ಅದೇ ರೀತಿ ಸಿದ್ದಾರ್ಥ ನಗರದಲ್ಲಿರುವ ಕಾವಾದಲ್ಲಿ ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ, ರಂಗಾಯಣ ಜಾನಪದ ರಂಗ ಉತ್ಸವ, ಸಯ್ಯಾಜಿರಾವ್ ರಸ್ತೆಯಲ್ಲಿನ ಹಸಿರು ಮಂಟಪದಲ್ಲಿ ದಸರಾ ವಿದ್ಯುತ್ ದೀಪಾಲಂಕಾರ, ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರದ ಆವರಣದಲ್ಲಿ ವಸ್ತು ಪ್ರದರ್ಶನ ಹಾಗೂ ಅರಮನೆ ಆವರಣದ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ಗುರುವಾರದಿಂದಲೇ ಶರನ್ನವರಾತ್ರಿ ಆಚರಿಸಲಿದ್ದಾರೆ. ಸಂಸದರಾಗಿ ಆಯ್ಕೆಯಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನದಲ್ಲಿ ಕುಳಿತು 10ನೇ ವರ್ಷ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಸಲಾಗಿದೆ.
ಪೊಲೀಸ್ ಸಹಾಯ ನೀಡಲು ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರ ತೆರೆಯಲಾಗಿದೆ. ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್ ಕ್ಯಾಮೆರಾ ಕಣ್ಗಾವಲು ಇರಲಿದೆ. ದಸರಾ ಪ್ರಯಕ್ತ ಅರಮನೆ ಸೇರಿದಂತೆ ನಾನಾ ಕಡೆ ನಾನಾ ಕಾರ್ಯಕ್ರಮಗಳು ನಡೆಯುವುದರಿಂದ ಮೊದಲ ಹಂತದಲ್ಲಿ 2,996 ಜನ, ಎರಡನೇ ಹಂತದಲ್ಲಿ 4,999 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.