ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಸಂಕಷ್ಟ ಶುರುವಾಗಿದೆ. ಹೀಗಾಗಿ ವಿಪಕ್ಷಗಳು ಅಧಿಕಾರದಿಂದ ಕೆಳಗೆ ಇಳಿಸಲು ಮುಂದಾಗಿವೆ. ಈ ಮಧ್ಯೆ ಸಿಎಂ ಕುರ್ಚಿಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಹೀಗಾಗಿ ಗುಪ್ತ ಸಭೆಗಳು ನಡೆಯುತ್ತಿವೆ. ಈಗ ದಲಿತ ಸಚಿವರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರರಣ ದೊಡ್ಡದಾದರೂ ಸಿಎಂ ಮಾತ್ರ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮಾತ್ರ ಹತ್ತು ಹಲವು ಅನುಮಾನ ಮೂಡಿಸುತ್ತಿದೆ. ಸಿದ್ದರಾಮಯ್ಯ ವಿರುದ್ದ ಇ.ಡಿ ಪ್ರಕರಣ ದಾಖಲಾಗುತ್ತಿದ್ದಂತೆ ಸಚಿವರ ಗುಪ್ತಸಭೆಗಳು ಆರಂಭವಾಗಿವೆ. ಸಚಿವ ಪರಮೇಶ್ವರ್, ಎಚ್ ಸಿ ಮಹದೇವಪ್ಪ ಹಾಗೂ ಸಚಿವ ಸತೀಶ್ ಜಾರಕಿಹೊಳಿ, ಮಹದೇವಪ್ಪ ಸರ್ಕಾರಿ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ಸ್ಥಿತ್ಯಂತರದ ಆತಂಕ ತೆರೆ ಮರೆಯಲ್ಲಿ ಶುರುವಾಗಿದೆ. ಸಿಎಂ ಸಿದ್ದರಾಮಯ್ಯನವರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆದಿದ್ದು, ಯಾರೂ ಬಹಿರಂಗವಾಗಿ ಹೇಳಿಕೊಳ್ಳಲು ಸಿದ್ದರಿಲ್ಲ. ಹೀಗಾಗಿ ಈ ಗುಪ್ತ ಸಭೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಪರಮೇಶ್ವರ್- ಡಿಕೆಶಿ ನಂತರ ಸತೀಶ್ ಜಾರಕಿಹೊಳಿ ಪರಮೇಶ್ವರ ಹಾಗೂ ಮಹದೇವಪ್ಪ ಚರ್ಚೆ ನಡೆದಿದೆ. ಸರ್ಕಾರಕ್ಕೆ ತೊಂದರೆಯಾದರೆ, ಹೇಗೆ ಡ್ಯಾಮೇಜ್ ಕಂಟ್ರೋಲ್ ಮಾಡಬೇಕು ಎಂಬ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಬಿಜೆಪಿ ಮಾತ್ರ ನಾವು ರಾಜೀನಾಮೆ ಪಡೆಯುತ್ತೇವೆ ಎನ್ನುತ್ತಿದೆ.