ಮೈಸೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.ಈ ಬೆನ್ನಲ್ಲೇ ಸಿಎಂ ಪತ್ನಿಗೆ ನೀಡಲಾಗಿದ್ದ 14 ಸೈಟ್ ಗಳ ಖಾತೆ ರದ್ದು ಮಾಡಲಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಪತ್ನಿಯು ಎಲ್ಲ 14 ಸೈಟ್ ಗಳನ್ನು ಹಿಂದಕ್ಕೆ ನೀಡಿ ಪತ್ರ ಬರೆದಿದ್ದರು. ಈಗ ಪಾರ್ವತಮ್ಮ ಸಿದ್ದರಾಮಯ್ಯ ಅವರಿಗೆ ಸೇರಿದ ಎಲ್ಲ 14 ಸೈಟ್ ಗಳ ಖಾತೆ ರದ್ದು ಮಾಡಲಾಗಿದೆ. ಸಿಎಂ ಪತ್ನಿ ಪಾರ್ವತಮ್ಮ ಅವರೇ ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತಾ ರದ್ದು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮುಡಾ ಆಯುಕ್ತ ರಘುನಂದನ್ ಮಾತನಾಡಿ, 14 ಸೈಟ್ ಗಳು ಮುಡಾಗೆ ಮರಳಿವೆ. ಹೀಗಾಗಿ ಆ 14 ಸೈಟ್ ಗಳ ಕ್ರಯ ಪತ್ರ ರದ್ದಾಗಿದೆ. ಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸೈಟ್ ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ. ತನಿಖೆ ನಡೆಯುತ್ತಿದ್ದರು ಸಂಬಂಧಿತರು ಸೈಟ್ ವಾಪಾಸ್ ಕೊಟ್ಟರೆ ವಾಪಸ್ಸು ಪಡೆಯಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಮ್ಮ ಅವರ ಜಮೀನನ್ನು ಮುಡಾ ಸ್ವಾಧೀನಕ್ಕೆ ಪಡೆದು ಬಡಾವಣೆ ನಿರ್ಮಿಸಿತ್ತು. ಹೀಗಾಗಿ ತಮ್ಮ ಜಮೀನಿಗೆ ಪರಿಹಾರ ನೀಡುವಂತೆ ಪಾರ್ವತಮ್ಮ ಅವರು ಮುಡಾಗೆ ಅರ್ಜಿ ಸಲ್ಲಿಸಿದ್ದರು. ಪರಿಹಾರವಾಗಿ ಮುಡಾ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ಒಟ್ಟು 14 ನಿವೇಶಗಳನ್ನು ನೀಡಲಾಗಿತ್ತು. ಹೆಚ್ಚು ಮೌಲ್ಯವಿರುವ ಬಡಾವಣೆಯಲ್ಲಿ ಸೈಟ್ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಈ ಕುರಿತು ಸಿಎಂ ವಿರುದ್ಧ ಲೋಕಾಯುಕ್ತ ಹಾಗೂ ಇಡಿಯಲ್ಲಿ ದೂರು ದಾಖಲಾಗಿದೆ.