ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ಭಾರತ ತಂಡವು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಟೂರ್ನಿಯಯಲ್ಲಿ ರವಿಚಂದ್ರನ್ ಅಶ್ವಿನ್ ಉತ್ತಮವಾಗಿ ಆಟವಾಡಿದ್ದಾರೆ. ಸರಣಿಯ 2ನೇ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಪಡೆದಿದ್ದ ಅಶ್ವಿನ್, 2ನೇ ಇನಿಂಗ್ಸ್ನಲ್ಲಿ ಮೂರು ವಿಕೆಟ್ ಉರುಳಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಭರ್ಜರಿ ಶತಕದ ಜೊತೆಗೆ 6 ವಿಕೆಟ್ ಪಡೆದಿದ್ದರು. ಈ ಅದ್ಭುತ ಪ್ರದರ್ಶನದಿಂದಾಗಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದಿದ್ದಾರೆ. ಈ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಅವರ ವಿಶ್ವ ದಾಖಲೆ ಸರಿಗಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 61 ಟೆಸ್ಟ್ ಸರಣಿಗಳಲ್ಲಿ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಭಾರತೀಯ ಸ್ಪಿನ್ನರ್ ಈ ದಾಖಲೆ ಸರಿಗಟ್ಟಿದ್ದಾರೆ. 43 ಟೆಸ್ಟ್ ಸರಣಿಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ 11 ಬಾರಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದು ದಾಖಲೆ ಸರಿಗಟ್ಟಿದ್ದಾರೆ. ಈ ದಾಖಲೆ ಮುರಿಯುವ ತವಕದಲ್ಲಿಯೂ ಇದ್ದಾರೆ.
ಭಾರತ ತಂಡವು ಅ. 16 ರಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗುವ ಟೆಸ್ಟ್ ಸರಣಿ ಆಡಲಿದೆ. 3 ಟೆಸ್ಟ್ ಗಳನ್ನು ನ್ಯೂಜಿಲೆಂಡ್ ವಿರುದ್ಧ ಭಾರತ ಆಡಲಿದೆ.