ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನೀಕಾಂತ್ ಊಟ ಮಾಡಿ ಮಲಗಿದ ನಂತರ ಮಧ್ಯರಾತ್ರಿ ಅನಾರೋಗ್ಯ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಮನೆಗೆ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸಿದ್ದರು. ಆನಂತರ ವೈದ್ಯರ ಸಲಹೆ ಮೇರೆಗೆ ರಜನಿ ಅವರನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಗಾಬರಿ ಆಗುವಂತೆ ಏನೂ ಆಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಸ್ಪತ್ರೆಯ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥರಾದ ಡಾ. ಸಾಯಿ ಸತೀಶ್ ಅವರ ನೇತೃತ್ವದಲ್ಲಿ ವೈದ್ಯರ ತಂಡವೊಂದು ರಜನಿಯವರ ಹೃದಯ ಮತ್ತು ಅಲ್ಲಿಂದಾಗುವ ರಕ್ತ ಪರಿಚಲನೆಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡುತ್ತಿದೆ. 2021ರಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಜನೀಕಾಂತ್, ಕರೋಟಿಡ್ ಆರ್ಟೆರಿ ರೀವ್ಯಾಸ್ಕುಲರೈಸೇಷನ್ ಪ್ರೊಸೀಜರ್ ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ರಜನಿ ಅಭಿನಯದ ವೆಟ್ಟೈಯನ್ ಅ. 10ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೆ ಈಗ ಚಿತ್ರ ತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.