ಬೆಂಗಳೂರು: ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ನಗರದ ಹೈಗ್ರೌಂಡ್ಸ್ ಠಾಣೆಗೆ ಈ ಕುರಿತು ದೂರು ನೀಡಲಾಗಿದೆ. ಈ ವೇಳೆ ಮಾತನಾಡಿರುವ ಮಾಜಿ ಸಂಸದ ಉಗ್ರಪ್ಪ, ಬಿಜೆಪಿಯಿಂದ ಕಾಂಗ್ರೆಸ್ ಬೀಳುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದೇವೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಯತ್ನಾಳ್ ರನ್ನು ಕರೆದು ವಿಚಾರಣೆ ನಡೆಸಿ ಎಂದು ದೂರು ನೀಡಿದ್ದೇವೆ. ಪೊಲೀಸರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಇಡಿ, ಐಡಿ ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದಿದ್ದಾರೆ.
ಇನ್ನೊಂದೆಡೆ ಸಿಎಂ ವಿರುದ್ಧ ಪ್ರಕರಣದ ಕುರಿತು ಮಾತನಾಡಿದ ಅವರು, ಸಿಎಂ ವಿರುದ್ಧ ದಾಖಲಾಗಿರುವ ಪ್ರಕರಣ ರಾಜಕೀಯ ಪ್ರೇರಿತವಾದದ್ದು, ಸಿದ್ದರಾಮಯ್ಯರ ಮೇಲೆ ವಿನಾಕಾರಣ ದೂರು ದಾಖಲಾಗುತ್ತಿದೆ. ವಿರೋಧಿಗಳು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದ್ದಾರೆ. ಎಷ್ಟೇ ಪ್ರಕರಣ ದಾಖಲಾದರೂ ಸಹ ಅದನ್ನ ಎದುರಿಸುತ್ತೇವೆ ಎಂದಿದ್ದಾರೆ.