ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿಯ ಹಿಂದಿದ್ದಾರೆ. ಈಗಾಗಲೇ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಅವರಿಗೆ ಜಾಮೀನು ಸಿಗುತ್ತದೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇತ್ತು. ಆದರೆ, ಇಂದು ಕೂಡ ಅವರಿಗೆ ಜಾಮೀನು ಸಿಕ್ಕಿಲ್ಲ. ಅರ್ಜಿ ವಿಚಾರಣೆಯನ್ನು ಅ. 4ಕ್ಕೆ ಮುಂದೂಡಲಾಗಿದೆ.
ನಟ ದರ್ಶನ್ ತೂಗುದೀಪ ಅವರ ಅರ್ಜಿಯೊಂದಿಗೆ ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಕೂಡ ಕೋರ್ಟ್ ನಲ್ಲಿ ಸೋಮವಾರ ನಡೆಯಿತು. ದರ್ಶನ್ ಹಾಗೂ ಅವರ ಅಭಿಮಾನಿಗಳು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ನಟ ದರ್ಶನ್ ಪರ ವಕೀಲರು ವಾದ ಮಂಡನೆಗೆ ಅಗತ್ಯ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ವಿಚಾರಣೆಯನ್ನು ಕೋರ್ಟ್ 5 ದಿನ ಮುಂದೂಡಿದೆ. ಅಕ್ಟೋಬರ್ 4 ರಂದು ಮತ್ತೆ ವಿಚಾರಣೆ ನಡೆದು ಆ ದಿನವೇ ತೀರ್ಪು ಲಭ್ಯವಾಗುವ ಸಾಧ್ಯತೆ ಕೂಡ ಇದೆ.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾದ ಹಿನ್ನೆಲೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿಯೇ ಇನ್ನೂ 5 ದಿನ ಇರಬೇಕಿದೆ. ದರ್ಶನ್ ಬರುತ್ತಾರೆಂಬ ಕಾರಣಕ್ಕೆ ಅವರ ಆಪ್ತರು ಹೆಲಿಕಾಪ್ಟರ್ ಬುಕ್ಕಿಂಗ್ ಮಾಡಿದ್ದರು. ಆದರೆ, ಈಗ ಎಲ್ಲರಿಗೂ ನಿರಾಸೆಯಾಗಿದೆ.
ಪೊಲೀಸರು ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ ನಂತರ ದರ್ಶನ್ ಪರ ವಕೀಲರು ಸೆಪ್ಟೆಂಬರ್ 21 ರಂದು ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿತ್ತು. ಎಸ್‌ಪಿಪಿ ಪ್ರಸನ್ನಕುಮಾರ್, ಆರೋಪಿಗಳಿಗೆ ಜಾಮೀನು ನೀಡದಂತೆ ತಕರಾರು ಅರ್ಜಿ ಸಲ್ಲಿಸಿದ ನಂತರ ಸೆ. 27ರಂದು ವಿಚಾರಣೆ ಆರಂಭವಾಯಿತು. ದರ್ಶನ್ ಪರ ಕಿರಿಯ ವಕೀಲ ಸುನಿಲ್, ‘ ಕಕ್ಷಿದಾರರ ಪರ ಹಿರಿಯ ವಕೀಲರು ಲಭ್ಯರಿಲ್ಲ. ಹೀಗಾಗಿ, ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು.
ಆಕ್ಷೇಪ ವ್ಯಕ್ತಪಡಿಸಿದ್ದ ಎಸ್‌ಪಿಪಿ ಪ್ರಸನ್ನಕುಮಾರ್, ‘ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ದರ್ಶನ್ ಪರ ವಕೀಲರು ಈ ಹಿಂದೆ ತಕರಾರು ತೆಗೆದಿದ್ದರು. ಈಗ ಆಕ್ಷೇಪಣೆ ಸಲ್ಲಿಸಿದ್ದೇವೆ. ವಾದ ಮಂಡನೆಗೂ ಸಿದ್ಧರಿದ್ದೇವೆ. ವಾದ ಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ನ್ಯಾಯಾಧೀಶರು ಅಂತಿಮವಾಗಿ ಸೆ. 30ಕ್ಕೆ ವಿಚಾರಣೆ ಮುಂದೂಡಿದ್ದರು. ಈಗ ಮತ್ತೆ ವಿಚಾರಣೆಯು ಅ. 4ಕ್ಕೆ ಮುಂದೂಡಿಕೆಯಾಗಿದೆ.