ಬೆಂಗಳೂರು: ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಹಾಗೂ ಆತನ ಸಹಚರರ ಮೇಲೆ ಮತ್ತೊಂದು ಗ್ಯಾಂಗ್ ದಾಳಿ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಲಗ್ಗೆರೆಯ ಕಪೀಲನಗರದಲ್ಲಿ ನಡೆದಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ರೌಡಿ ಶೀಟರ್ ನರೇಂದ್ರ ಅಲಿಯಾಸ್ ದಾಸ(22) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಹಲ್ಲೆಗೊಳಗಾಗಿರುವ ರೌಡಿ ಶೀಟರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ರಮೇಶ್, ನಂದಿನಿ ಲೇಔಟ್ ಠಾಣೆ ರೌಡಿ ಶೀಟರ್ ಸಂಕೇತ್, ತೇಜಸ್, ಮಂಜುನಾಥ, ದೀಕ್ಷಿತ್, ಅರುಣ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹಲ್ಲೆಗೊಳಗಾಗಿರುವ ನರೇಂದ್ರ ಹಾಗೂ ಆರೋಪಿ ರಮೇಶ್ ಹಿಂದೆ ಸ್ನೇಹಿತರಾಗಿದ್ದರು. ರಮೇಶ್ ನ ಸ್ನೇಹಿತ ಮನು ಎಂಬಾತನ ಮೇಲೆ ನರೇಂದ್ರ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದ. ಹೀಗಾಗಿ ರಮೇಶ್, ಮನು ಹಾಗೂ ಸಹಚರರು ಕುರುಬರಹಳ್ಳಿಯಲ್ಲಿ ನರೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹೀಗಾಗಿ ಇಬ್ಬರೂ ದ್ವೇಷ ಕಾರುತ್ತಲೇ ಇದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.