ಬೆಳಗಾವಿ: ಮುಡಾ ಪ್ರಕರಣ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿವೆ. ಹೀಗಾಗಿ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ-ಜೆಡಿಎಸ್ ನಾಯಕರ ಮದ್ಯೆ ವಾಕ್ಸಮರ ನಡೆಯುತ್ತಿದೆ. ಈಗ ಸಿಎಂ ರಾಜೀನಾಮೆ ಕೇಳುತ್ತುರವವರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಸಾವಿರ ಕೋಟಿ ರೂ. ಮೊತ್ತದ ಎಲೆಕ್ಟ್ರೋ ಬಾಂಡ್ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿನೋಟಿಫೈ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ರಾಜೀನಾಮೆ ನೀಡಲಿ. ಆನಂತರ ನೀವು ಸಿಎಂ ರಾಜೀನಾಮೆ ಕೇಳಿ ಎಂದು ಸವಾಲು ಹಾಕಿದ್ದಾರೆ.
ಸಿಎಂ ವಿರುದ್ಧ ದಾಖಲಾಗಿರುವ ಪ್ರಕರಣ ರಾಜಕೀಯ ಪ್ರೇರಿತ. ಇದಕ್ಕೆ ನಾವು ಬಗ್ಗುವ ಮಾತೇ ಇಲ್ಲ. ನಾವೂ ರಾಜಕೀಯ ಮಾಡುತ್ತಿದ್ದು, ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ರಾಜಕೀಯ ಹಾಗೂ ಕಾನೂನು ಮೂಲಕವೇ ಉತ್ತರಿಸುತ್ತೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಯೋಜನೆಗಳು ಕೇವಲ ಕರ್ನಾಟಕಕ್ಕಷ್ಟೆ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗಿವೆ. ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ. ಇದು ನಿರಂತರ ಪ್ರಕ್ರಿಯೆ, ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.