ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 11,200 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವಾರು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ಗೆ ಪುಣೆ ಮೆಟ್ರೋ ವಿಭಾಗ ಕೂಡ ಸೇರಿದೆ. ಇದು ಪುಣೆ ಮೆಟ್ರೋ ರೈಲು ಯೋಜನೆ (ಹಂತ-1) ಪೂರ್ಣಗೊಳಿಸುವಿಕೆಯನ್ನು ಪ್ರತಿನಿಧಿಸುತ್ತದೆ. ಅಂದಾಜು 1,810 ಕೋಟಿ ರೂ. ವೆಚ್ಚದ ಈ ಮೆಟ್ರೋ ಯೋಜನೆ ಪುಣೆಯಲ್ಲಿ ನಗರ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಸುಮಾರು 2,955 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಪುಣೆ ಮೆಟ್ರೋದ ಸ್ವರ್ಗೇಟ್-ಕಟ್ರಾಜ್ ವಿಸ್ತರಣೆಗೆ ಪಿಎಂ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 7,855 ಎಕರೆ ವಿಸ್ತೀರ್ಣದ ಬಿಡ್ಕಿನ್ ಕೈಗಾರಿಕಾ ಪ್ರದೇಶವನ್ನು ಪ್ರಧಾನಮಂತ್ರಿ ಮೋದಿ ಲೋಕಾರ್ಪಣೆ ನೆರವೇರಿಸಲಿದ್ದಾರೆ.
ಪ್ರವಾಸಿಗರು, ವ್ಯಾಪಾರ ಪ್ರಯಾಣಿಕರು ಮತ್ತು ಹೂಡಿಕೆದಾರರಿಗೆ ಸಂಪರ್ಕ ಮತ್ತು ಪ್ರವೇಶವನ್ನು ಹೆಚ್ಚಿಸುವ, ನವೀಕರಿಸಿದ ಸೋಲಾಪುರ ವಿಮಾನ ನಿಲ್ದಾಣವನ್ನು ಕೂಡ ಉದ್ಘಾಟಿಸಲಿದ್ದಾರೆ.