ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಪಕ್ಷಗಳು ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡ ಫೈಟ್ ನಡೆಯುತ್ತಿದೆ. ಸಿಎಂ ರಾಜೀನಾಮೆಗಾಗಿ ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಮಧ್ಯೆ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಮೂರು ಪಕ್ಷಗಳಿಗೂ ಪ್ರತಿಷ್ಠೆಯಾಗುತ್ತಿದೆ.
ರಾಜ್ಯದಲ್ಲಿ ಮುಂದಿನ ವಾರ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ನಾಯಕರು ತೆರೆ ಮರೆಯ ಹಿಂದೆ ಈಗಿನಿಂದಲೇ ಕಾರ್ಯ ತಂತ್ರ ಹೆಣೆಯುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ, ಸಂಡೂರಿನಿಂದ ಆಯ್ಕೆಯಾಗಿದ್ದ ತುಕಾರಾಂ, ಚನ್ನಪಟ್ಟಣದಿಂದ ಆಯ್ಕೆಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ನಂತರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ರಾಷ್ಟ್ರ ರಾಜಕಾರಣಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೂರು ಪಕ್ಷಗಳು ಈ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ತುಕಾರಾಂ ಗೆಲುವು ಸಾಧಿಸಿದ ನಂತರ ಬಳ್ಳಾರಿ ಸಂಸದರಾದರು. ಹೀಗಾಗಿ ಈ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಇದರೊಂದಿಗೆ ಚನ್ನಪಟ್ಟಣದಲ್ಲೂ ಗೆಲುವು ಸಾಧಿಸಲು ತಂತ್ರ ಹೆಣೆಯುತ್ತಿದೆ. ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಕಣಕ್ಕಿಳಿಯುತ್ತಾರೆಂಬ ಮಾತು ಕೇಳಿ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಮಾತ್ರ ನಿರಂತರವಾಗಿ ಚನ್ನಪಟ್ಟಣದಲ್ಲಿ ಸಕ್ರಿಯರಾಗಿದ್ದಾರೆ. ಶಿಗ್ಗಾವಿಯಲ್ಲೂ ಗೆಲುವು ಸಾಧಿಸುವ ಬಯಕೆ ಹೊಂದಿದೆ.
ಚನ್ನಪಟ್ಟಣದಲ್ಲಿ ಮೈತ್ರಿಯಲ್ಲಿ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಸಿ.ಪಿ. ಯೋಗೇಶ್ವರ್ ಟಿಕೆಟ್ ಗೆ ಪಟ್ಟು ಹಿಡಿದಿದ್ದರೆ, ಜೆಡಿಎಸ್ ಕ್ಷೇತ್ರ ಬಿಟ್ಟು ಕೊಡಲು ಮುಂದಾಗುತ್ತಿಲ್ಲ. ಶಿಗ್ಗಾಂವಿಯಿಂದ ಬಸವರಾಜ ಬೊಮ್ಮಾಯಿ ಪುತ್ರರ ಹೆಸರು ಕೇಳಿಬರುತ್ತಿದೆ. ಸಂಡೂರಿನಿಂದ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗೇ ಪುನಃ ಅವಕಾಶ ನೀಡಲಾಗುತ್ತೋ ಅಥವಾ ಹೊಸಬರಿಗೆ ಅವಕಾಶ ಸಿಗಲಿದೆಯೋ ಕಾಯ್ದು ನೋಡಬೇಕಿದೆ.