ಅಮರಾವತಿ: ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಆಂಧ್ರ ಮಾಜಿ ಸಿಎಂ ವೈಎಸ್ ಆರ್ ಸಿಪಿ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ರದ್ದು ಮಾಡಿದ್ದಾರೆ.
ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾದ ಪ್ರಕರಣದಲ್ಲಿ ಈಗ ಆಂಧ್ರದಲ್ಲಿ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಮಧ್ಯೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಈ ಮಧ್ಯೆ ಇಂದು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಮುಂದಾಗಿದ್ದರು. ಆದರೆ, ಜಗನ್ ಅವರಿಗೆ ಪೊಲೀಸರು ನೋಟಿಸ್ ನೀಡಲಿದ್ದಾರೆ ಎನ್ನಲಾಗಿದ್ದು, ಅವರು ತಮ್ಮ ಪ್ರವಾಸ ರದ್ದುಗೊಳಿಸಿಕೊಂಡಿದ್ದಾರೆ.
ಪ್ರವಾಸ ರದ್ದುಪಡಿಸಿದ್ದಕ್ಕೆ ರೆಡ್ಡಿ ಅವರು ಯಾವುದೇ ಕಾರಣ ತಿಳಿಸಿಲ್ಲ ಎಂದು ಮೂಲಗಳು ಹೇಳಿವೆ. ಆದರೆ, ದೇವಾಲಯ ಪ್ರವೇಶಕ್ಕೂ ಮುನ್ನ ಜಗನ್ ಅವರು ತಮ್ಮ ಶ್ರದ್ಧೆಯನ್ನು ಘೋಷಿಸಬೇಕು ಎಂದು ಎನ್ ಡಿಎ ನಾಯಕರು ಆಗ್ರಹಿಸಿದ ಬೆನ್ನಲ್ಲೇ ಜಗನ್ ಪ್ರವಾಸ ರದ್ದಾಗಿದೆ ಎನ್ನಲಾಗುತ್ತಿದೆ.
ತಿರುಪತಿ ಪ್ರಸಾದವಾದ ಲಾಡುಗಳನ್ನು ಸಿದ್ಧಪಡಿಸಲು ಪೂರೈಕೆಯಾಗಿದ್ದ ಕಲಬೆರಕೆ ತುಪ್ಪ ವಿವಾದ ಕುರಿತು ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಈಗಾಗಲೇ 9 ಜನ ಸದಸ್ಯರ ವಿಶೇಖ ತನಿಖಾ ತಂಡ ರಚಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಾದ ಅಕ್ರಮದ ಬಗ್ಗೆ ಕೂಡ ತನಿಖೆ ನಡೆಸುವಂತೆ ಸೂಚಿಸಲಾಗಿದೆ.