ಬೆಂಗಳೂರು: ‘‘ಕರ್ನಾಟಕದಲ್ಲಿ ಪರಿಶಿಷ್ಟರ ನಿಧಿಯಲ್ಲಿ ಹಗರಣವಾಗಿದೆ’’ ಎಂದು ಆರೋಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ದಲಿತರ ಕುರಿತು ನಿಮಗೆ ನಿಜವಾಗಿಯೂ ಕಾಳಜಿ ಇದ್ದರೆ ರಾಷ್ಟ್ರಮಟ್ಟದಲ್ಲಿ ಎಸ್ಸಿ ಉಪ ಯೋಜನೆ ಹಾಗೂ ಎಸ್ಟಿ ಉಪ ಯೋಜನೆ ಕಾಯ್ದೆ ಜಾರಿಗೆ ತನ್ನಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಈ ಯೋಜನೆ ಮೂಲಕ ದಲಿತರ ಜನ ಸಂಖ್ಯೆಗೆ ತಕ್ಕಂತೆ ಅನುದಾನ ಮೀಸಲಿಡೆ. ಆನಂತರ ನಮ್ಮ ದಲಿತ ಕಾಳಜಿ ಬಗ್ಗೆ ಮಾತನಾಡಿ ಎಂದು ಸವಾಲು ಹಾಕಿದ್ದಾರೆ.
ಈ ಕಾಯ್ದೆ ಜಾರಿಗೆ ನಾವು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಒಪ್ಪಿಕೊಳ್ಳದ ನರೇಂದ್ರ ಮೋದಿ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರದಲ್ಲಿ ಗಿಮಿಕ್ಕು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಸರ್ಕಾರದ ಬಜೆಟ್ ಗಾತ್ರ ರೂ.3.71,383 ಕೋಟಿ, ಅದರಲ್ಲಿ ರೂ.39,121 ಕೋಟಿಯನ್ನು ಎಸ್ಸಿ, ಎಸ್ಟಿ ಯೋಜನೆಗೆ ತೆಗೆದಿಟ್ಟಿದ್ದೇವೆ. ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ರೂ.48.21 ಲಕ್ಷ ಕೋಟಿ ರೂ. ಇದರಲ್ಲಿ ಎಸ್ಸಿ, ಎಸ್ಟಿ ಅಭಿವೃದ್ದಿಗಾಗಿ ನೀಡಿರುವ ಅನುದಾನ ರೂ.2,90,401 ಕೋಟಿ ರೂ. ಮಾತ್ರ. ಇದು ದಲಿತರ ಮೇಲಿನ ಕೇಂದ್ರದ ಕಾಳಜಿ ತೋರಿಸುತ್ತದೆ ಎಂದು ಗುಡುಗಿದ್ದಾರೆ. ಈಗಲಾದರೂ ಯೋಜನೆ ಜಾರಿಗೊಳಿಸಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.