ಕಾರವಾರ: ಕಳೆದ ಎರಡು ತಿಂಗಳ ಹಿಂದೆ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ದೊಡ್ಡ ಅನಾಹುತವೊಂದು ಜಿಲ್ಲೆಯಲ್ಲಿ ನಡೆದಿತ್ತು. ಜಿಲ್ಲೆಯ ಶಿರೂರು ಗುಡ್ಡ ಕುಸಿದ ಪರಿಣಾಮ ಗಂಗಾವಳಿ ನದಿಯಲ್ಲಿ ಹಲವರು ತೇಲಿ ಹೋಗಿದ್ದರು. ಈ ಪೈಕಿ ಕೇರಳ ಮೂಲದ ಲಾರಿ ಹಾಗೂ ಚಾಲಕ ಕೂಡ ನದಿಯಲ್ಲಿ ನಾಪತ್ತೆಯಾಗಿದ್ದರು. ಆದರೆ ಈಗ ಬರೋಬ್ಬರಿ 72 ದಿನಗಳ ನಂತರ ಲಾರಿ ಹಾಗೂ ಚಾಲಕ ಪತ್ತೆಯಾಗಿದ್ದಾರೆ.
ಕೇರಳ ಮೂಲದ ಲಾರಿ ಹಾಗೂ ಚಾಲಕ ಅರ್ಜುನ್ ಶವ ಈಗ ಪತ್ತೆಯಾಗಿದೆ. ಲಾರಿಯಲ್ಲಿ ಅರ್ಜುನನ ದೇಹ ಎರಡು ತುಂಡುಗಳಾಗಿ ಪತ್ತೆಯಾಗಿದೆ. ದುರ್ಘಟನೆಯ ಭೀಕರತೆಯನ್ನು ಈ ದೇಹ ಹೇಳುವಂತಿದೆ. ಅಲ್ಲದೇ, ಇದೇ ಘಟನೆಯಲ್ಲಿ ನಾಪತ್ತೆಯಾದ ಇನ್ನೂ ಇಬ್ಬರ ಶೋಧ ಕಾರ್ಯ ನಡೆಯುತ್ತಿದೆ.
ಘಟನೆಯ ನಂತರ ನದಿಯಲ್ಲಿ ಸಿಲುಕಿದ್ದ ಹಲವರ ಶವ ಪತ್ತೆಯಾಗಿದ್ದವು. ಆದರೆ ಇನ್ನುಳಿದ ಕಾರ್ಯಾಚರಣೆಗಾಗಿ ಮಳೆ ಅಡ್ಡಿಯಾಗಿತ್ತು. ಈಗ ಮತ್ತೆ ಕಾರ್ಯಾಚರಣೆ ಆರು ದಿನಗಳಿಂದ ಆರಂಭವಾಗಿತ್ತು. ಲಾರಿ ಹಾಗೂ ಚಾಲಕ ಅರ್ಜುನ್ ಮೃತದೇಹ ಪತ್ತೆಯಾಗಿದೆ.
ಕಾರ್ಯಾಚರಣೆ ನಡೆಸಿ ಲಾರಿ ಹೊರ ತೆಗೆಯುವ ವೇಳೆ ಅರ್ಜುನ್ ಸಹೋದರಿ ಪತಿ ಜಿತಿನ್ ಅಲ್ಲಿಯೇ ಇದ್ದರು. ವಾಹನ ಅರ್ಜುನ್ ಅವರದ್ದೇ ಎಂದು ಗುರುತಿಸಿದ್ದಾರೆ. ಅರ್ಜುನ್ ಮೃತದೇಹವನ್ನು ನೋಡಿ ಕುಟುಂಬಸ್ಥರು ಭಾವುಕರಾಗಿದ್ದಾರೆ.
ಜುಲೈ 16ರಂದು ಬೆಳಿಗ್ಗೆ 8. 45 ಕ್ಕೆ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿತ್ತು. ಜುಲೈ 23 ರಂದು ರಾಡಾರ್ ಮತ್ತು ಸೋನಾರ್ ಸಿಗ್ನಲ್ ಗಳಲ್ಲಿ ಲಾರಿ ಇರುವ ಕುರಿತ ತಿಳಿದು ಬಂದಿತ್ತು. ಗುಡ್ಡ ಕುಸಿತದಲ್ಲಿ ಒಟ್ಟು 11 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇಲ್ಲಿಯವರೆಗೆ 8 ಜನರ ಮೃತದೇಹ ಪತ್ತೆಯಾಗಿದೆ. ಮೂವರ ಬಗ್ಗೆ ಯಾವ ಸುಳಿವು ಕೂಡ ಸಿಕ್ಕಿಲ್ಲ. ಈ ಕುರಿತು ಶೋಧ ಕಾರ್ಯ ನಡೆಯುತ್ತಿದೆ.