ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಸುಲ್ತಾನ್ ಪುರದ ಪ್ರಣವ ಪಂಚಾಕ್ಷರಿ ಗುರುಪೀಠದ (Pranava Panchakshari Gurupeeth Mutt) ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಪ್ರಣವ ಪಂಚಾಕ್ಷರಿ ಗುರುಪೀಠದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮೇಲೆ ಇಂತಹ ಆರೋಪ ಕೇಳಿ ಬಂದಿದೆ. ಮಠದ ಸೇವೆಗೆ ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳು ಸಂತ್ರಸ್ತೆಗೆ ಒತ್ತಡ ಹಾಕಿ 10 ಲಕ್ಷ ರೂ. ನೀಡಿ ಸೆಟ್ಲಮೆಂಟ್ ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಮಹಿಳೆಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಆರೋಪ ಮಾಡಿದ್ದಾರೆಂದು ಶ್ರೀಗಳು ಹೇಳಿದ್ದಾರೆ.
ಸಂತ್ರಸ್ತೆ ಮೂಲತಃ ಆಂಧ್ರಪ್ರದೇಶ ಮೂಲದವರು ಎನ್ನಲಾಗಿದೆ. ಸಂತ್ರಸ್ತ ಮಹಿಳೆ ಕಳೆದ 6 ತಿಂಗಳಿಂದ ಅಪ್ರಾಪ್ತ ಪುತ್ರಿ ಜೊತೆ ಮಠದಲ್ಲೇ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ದೌಜನ್ಯದ ನಂತರ ಸ್ವಾಮೀಜಿ ವಿರುದ್ಧ ದೂರು ನೀಡಲು ಸಂತ್ರಸ್ತೆ ಠಾಣೆಗಳಿಗೆ ಅಲೆದಾಡಿದ್ದಾರೆ. ಠಾಣೆಯ ವಿಜಿಟರ್ ರಿಜಿಸ್ಟರ್ ಬುಕ್ ನಲ್ಲಿ ಸಂತ್ರಸ್ತ ಮಹಿಳೆಯ ಹೆಸರು, ವಿಳಾಸ ಕೂಡ ದಾಖಲಾಗಿದೆ. ಆದರೆ, ಈಗ ಎಲ್ಲಿಯೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಈ ಕುರಿತು ಸ್ವಾಮೀಜಿ ಪ್ರತಿಕ್ರಿಯೆ ನೀಡಿ, ನನ್ನ ವಿರುದ್ಧದ ಆರೋಪಗಳೆಲ್ಲ ನಿರಾಧಾರ. ಆ ಮಹಿಳೆ ಅನುಷ್ಠಾನದಲ್ಲಿರುವಾಗ ಮಠದಲ್ಲಿ ಸೇವೆ ಮಾಡಲು ಬರುತ್ತೇನೆ ಅಂದ್ರು. ಆ ಮಹಿಳೆ ಮಠದ ಗೋಶಾಲೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಮಠದಲ್ಲಿ ನಮ್ಮ ಭಕ್ತರಿಗೂ ಮತ್ತೆ ಅವರಿಗೂ ಸ್ವಲ್ಪ ಜಗಳ ಆಗಿತ್ತು. ಹೀಗಾಗಿ ನಾವು ಅವರನ್ನು ಮರಳಿ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.