ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ, ಸಿಎಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಸಿಎಂ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಇದರ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಆರೋಪ- ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.
ಹೀಗಾಗಿ ಬಿಜೆಪಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಕಾಂಗ್ರೆಸ್ ನಲ್ಲಿಯೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಲು ಈಗಾಗಲೇ ಸದ್ದಿಲ್ಲದೇ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಕೇಳಗೆ ಇಳಿದರೆ, ನಾನೇ ಸಿಎಂ ಎಂದು ಹಲವರು ಈಗಾಗಲೇ ಪ್ರಯತ್ನಿಸುತ್ತಿದ್ದಾರೆ. ಇವುಗಳ ಮಧ್ಯೆ ‘ದಸರಾಗೆ ಹೊಸ ಸಿಎಂ..’ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಮ್ಸ್ಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಕಾನೂನಿಗೆ ಗೌರವ ನೀಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ರಿಸೈನ್ ಸಿದ್ದರಾಮಯ್ಯ ಎನ್ನುವ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ವ್ಯಂಗ್ಯಭರಿತ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಹಲವರು ದಸರಾಗೆ ಹೊಸ ಸಿಎಂ ಎಂದು ಪೋಸ್ಟ್ ಮಾಡುತ್ತಿದ್ದಾರೆ.