ಬೆಂಗಳೂರು: ಅರ್ಕಾವತಿ ಬಡಾವಣೆ ರೀಡೂ ಪ್ರಕರಣದ ವಿಷಯವಾಗಿ ಈಗ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮಧ್ಯೆ ದೊಡ್ಡ ಸಂಘರ್ಷ ಆರಂಭವಾಗಿದೆ. ರಾಜ್ಯಪಾಲರ ವಿರುದ್ಧ ಈಗ ರಾಜ್ಯ ಸರ್ಕಾರ ತಿರುಗಿ ಬಿದ್ದಿದೆ.
ಅರ್ಕಾವತಿ ಬಡಾವಣೆ ರೀಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು, ನ್ಯಾ. ಎಚ್.ಎಸ್. ಕೆಂಪಣ್ಣ ಅವರ ವಿಚಾರಣಾ ಆಯೋಗದ ವರದಿ ಹಾಗೂ ಸಂಬಂಧಪಟ್ಟ ದಾಖಲೆ ನೀಡುವಂತೆ ಕೋರಿದ್ದಾರೆ. ಈ ಕುರಿತು ಸರ್ಕಾರ. ಸೆ. 26ರಂದು ನಿರ್ಧಾರ ಕೈಗೊಳ್ಳಲಿದೆ.
ಸೆ. 26ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮನಿಸಿ ಮುಂದಿನ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದ ಸಂದರ್ಭದಲ್ಲಿ 2014ರಲ್ಲಿ ಅರ್ಕಾವತಿ ಬಡಾವಣೆಗೆ ಭೂಸ್ವಾಧೀನವಾಗಿದ್ದ 541 ಎಕರೆ ಭೂಮಿ ಡಿನೋಟಿಫೈ ಮಾಡಿದ ಪ್ರಕರಣದ ಕುರಿತಂತೆ ನ್ಯಾ.ಕೆಂಪಣ್ಣ ಆಯೋಗ ವಿಚಾರಣಾ ವರದಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗ ರಾಜ್ಯಪಾಲರು ಮಾಹಿತಿ ಕೇಳಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಕಿಡಿಕಾರುತ್ತಿದೆ.
ಮೊದಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು, ಆನಂತರ ಮಾಹಿತಿ ನೀಡುವುದರ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿದೆ. ರಾಜ್ಯಪಾಲರ ನಡೆ ಕುರಿತು ಬೇಸರ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ, ಹಿಂದೆ ಬಿಜೆಪಿ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಈ ವಿಚಾರದ ಕುರಿತು ಯಾವುದೇ ಕ್ರಮ ವಹಿಸಿಲ್ಲ. ವರದಿಯನ್ನು ವಿಧಾನಮಂಡಲದಲ್ಲಿ ಏಕೆ ಮಂಡಿಸಲಿಲ್ಲ ಮತ್ತು ಪ್ರಸ್ತಾಪಿಸಲಿಲ್ಲ. ಈಗ ರಾಜ್ಯಪಾಲರಿಗೆ ಪತ್ರ ಬರೆದಿರುವ ಸಿ.ಟಿ.ರವಿ ಅವರು ಸಚಿವರಾಗಿದ್ದಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿ ಗುಡುಗಿದ್ದಾರೆ.
ಸಿಎಂ ಆಗಿ ನಾನು ಡೀನೋಟಿಫೈ ಮಾಡಿದ್ದಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ರೀಡೂ ಆಗಿದೆ. ನ್ಯಾ.ಕೆಂಪಣ್ಣ ಆಯೋಗದ ವರದಿ ಸಂಪುಟದಲ್ಲಿ ಮಂಡನೆಯೇ ಆಗಿಲ್ಲ ಎಂದು ಸಿಎಂ ಹೇಳಿದ್ದಾರೆ.
ಅಲ್ಲದೇ, ರಾಜ್ಯಪಾಲರ ನಡೆಯ ಕುರಿತು ಬೇಸರ ವ್ಯಕ್ತಪಡಿಸಿದ್ದು, ರಾಷ್ಟ್ರಪತಿಗೆ ದೂರು ಸಲ್ಲಿಸಲು ಕೂಡ ಚಿಂತನೆ ನಡೆದಿದೆ ಎಂದಿದ್ದಾರೆ.