ಬೆಂಗಳೂರು: ತಿರುಪತಿ ಪ್ರಸಾದದ ವಿವಾದ ದೊಡ್ಡ ಮಟ್ಟದಲ್ಲಿ ಭುಗಿಲೆದ್ದಿದ್ದು, ಕರ್ನಾಟಕದಲ್ಲಿಯೂ ವಿವಿಧ ಬ್ರಾಂಡ್ ಗಳ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಸಚಿವರು ಸೂಚಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ. ತುಪ್ಪದ ಮಾದರಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಭಾನುವಾರ ವಿವಿಧ ಬಗೆಯ ತುಪ್ಪದ ಗುಣಮಟ್ಟ ಪರೀಕ್ಷೆ ಮಾಡಲು ಆಹಾರ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು. ಆದೇಶದ ಬೆನ್ನಲೇ ಅಧಿಕಾರಿಗಳು ಈಗ ಪರೀಕ್ಷಾ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಎಲ್ಲೆಲ್ಲಿಂದ ತುಪ್ಪಗಳು ಬರುತ್ತಿದೆ? ಹೇಗೆಲ್ಲಾ ಅವುಗಳನ್ನ ಮಾರಾಟ ಮಾಡಲಾಗುತ್ತಿದೆ? ಎಂಬೆಲ್ಲ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ.
ಹೀಗಾಗಿ ದೇವಾಲಯ ಹಾಗೂ ತುಪ್ಪದ ಸಂಗ್ರಹಕ್ಕೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಅಂಕಿತಾಧಿಕಾರಿ ಸಮ್ಮುಖದಲ್ಲಿ ತುಪ್ಪದ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ಈಗಾಗಲೇ ಸುಮಾರು 300 ಮಾದರಿ ತುಪ್ಪ ಸಂಗ್ರಹಿಸಲಾಗಿದೆ. ಸಿಲಿಕಾನ್ ಸಿಟಿಯ ಎಲ್ಲ ಪ್ರದೇಶಗಳಲ್ಲಿ ತುಪ್ಪದ ಸಂಗ್ರಹ ಮಾಡಲಾಗಿದೆ. ಒಂದು ವೇಳೆ ತುಪ್ಪದಲ್ಲಿ ಕೊಬ್ಬಿನಾಂಶ ಹೆಚ್ಚು ಕಂಡು ಬಂದರೆ ಕ್ರಮ ಕೈಗೊಳ್ಳೋದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.