ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಹತ್ಯೆ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರಂಭದಲ್ಲಿ ಹಂತಕ 30 ಪೀಸ್ ಮಾಡಿದ್ದ ಎನ್ನಲಾಗಿತ್ತು. ಆದರೆ, ಆತ 50 ಪೀಸ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ, ಈ ಕೊಲೆಯ ಹಿಂದೆ ಆತ್ಮೀಯ ಸ್ನೇಹಿತ ಇರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಯುವಕನೊಬ್ಬ ಮಹಾಲಕ್ಷ್ಮೀ ಅವರನ್ನು ಪ್ರತಿನಿತ್ಯ ಪಿಕಪ್ ಆಂಡ್ ಡ್ರಾಪ್ ಮಾಡುತ್ತಿದ್ದ ಎಂದು ಈಗಾಗಲೇ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕುಟುಂಬ ಸದಸ್ಯರು ಅಶ್ರಫ್, ಮಹಾಲಕ್ಷ್ಮಿಯ ಸಹೋದ್ಯೋಗಿಗಳಾದ ಮುಕ್ತಾ, ಶಶಿಧರ್ ಮತ್ತು ಸುನಿಲ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಾಲಕ್ಷ್ಮಿ ಈ ಮೂವರೊಂದಿಗೆ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಆರೋಪಿಯು ಭೀಕರವಾಗಿ ಹತ್ಯೆ ಮಾಡಿ 50 ತುಂಡು ಮಾಡಿ, ಫ್ರಿಜ್ ನಲ್ಲಿಟ್ಟು ಪರಾರಿಯಾಗಿದ್ದಾನೆ. ಮಹಾಲಕ್ಷ್ಮೀ ಅವರ ಪತಿ ಹೇಮಂತ್ ದಾಸ್, ನೆಲಮಂಗಲ ನಿವಾಸಿ ಅಶ್ರಫ್ ಎಂಬಾತನ ಮೇಲೆ ಈಗ ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು ಮಹಾಲಕ್ಷ್ಮೀ ಅವರ ಮೊಬೈಲ್ ಕರೆಗಳ ಸಿಡಿಆರ್ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ತಾಂತ್ರಿಕ ಸಂಗತಿಗಳು ಹಾಗೂ ವೈಯಾಲಿಕಾವಲ್ ಪೈಪ್ ಲೈನ್ ರಸ್ತೆ ಸುತ್ತಮುತ್ತಲಿನ ಮೊಬೈಲ್ ಟವರ್ ಗಳ ಮೂಲಕ ಬಂದು ಹೋಗಿರುವ ಕರೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಮೊಬೈಲ್ ಶಾಪ್ ಇಟ್ಟುಕೊಂಡಿರುವ ನಾನು ಮಹಾಲಕ್ಷ್ಮೀಯೊಂದಿಗೆ 6 ವರ್ಷಗಳ ಹಿಂದೆ ವಿವಾಹವಾಗಿದ್ದೆ. ಆದರೆ,ಇಬ್ಬರೂ ಕಳೆದ 9 ತಿಂಗಳ ಹಿಂದೆ ಬೇರೆ ಬೇರೆಯಾಗಿದ್ದೇವು. ಆದರೆ, ಇತ್ತೀಚೆಗೆ ಮಹಾಲಕ್ಷ್ಮೀಯ ಮನೆ ಮಾಲೀಕರು ಕರೆ ಮಾಡಿ, ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳಿದ್ದರು. ಬಂದು ನೋಡಿದಾಗ ದೇಹವನ್ನು ತುಂಡು ತುಂಡು ಮಾಡಿ ಫ್ರಿಜ್‌ನಲ್ಲಿಇಟ್ಟಿರುವುದು ತಿಳಿಯಿತು ಎಂದು ಪತಿ ಹೇಳಿದ್ದಾರೆ.
ಉತ್ತರಾಖಂಡ ಮೂಲದ ಅಶ್ರಫ್ ಎಂಬಾತ ಸಲೂನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಮಹಾಲಕ್ಷ್ಮಿ, ಆತನೊಂದಿಗೆ ಆತ್ಮೀಯವಾಗಿದ್ದಳು. ಅಶ್ರಫ್, ಪತ್ನಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಪತಿ ಹೇಳಿದ್ದಾರೆ. ಇತ್ತೀಚೆಗೆ ಅಶ್ರಫ್ ಹಾಗೂ ಮಹಾಲಕ್ಷ್ಮೀ ಮಧ್ಯೆ ಜಗಳವಾಗಿತ್ತು. ಹೀಗಾಗಿ ಶೇಷಾದ್ರಿಪುರ ಠಾಣೆಗೆ ದೂರು ಕೊಟ್ಟಿದ್ದಳು. ಆತನೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪತಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೇಮಂತ್‌ದಾಸ್ ಮತ್ತು ಮಹಾಲಕ್ಷ್ಮೀ ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆಯುತ್ತಿದ್ದವು. ಹೀಗಾಗಿ 2023 ರಲ್ಲಿ ಪತಿ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಹೇಮಂತ್ ದಾಸ್ ವಿರುದ್ಧ ನೆಲಮಂಗಲ ಠಾಣೆಗೆ ಮಹಾಲಕ್ಷ್ಮೀ ದೂರು ನೀಡಿದ್ದರು. ಆನಂತರ 2024ರಲ್ಲಿ ಪತಿ ಕೂಡ ಪತ್ನಿಯಿಂದ ಮಾನಸಿಕ ಕಿರುಕುಳವಾಗುತ್ತಿದೆ. ಹಣ ಕೊಡುವಂತೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಾಳೆ ಎಂದು ದೂರು ಸಲ್ಲಿಸಿದ್ದರು. ಆನಂತರ ಪೊಲೀಸರು ರಾಜಿ ಮಾಡಿದ್ದರು. ಆದರೆ, ಈಗ ಮಹಾಲಕ್ಷ್ಮೀ ಬರ್ಬರವಾಗಿ ಹತ್ಯೆಯಾಗಿದ್ದಾಳೆ.