ಬೆಂಗಳೂರು: ಗುಣಮಟ್ಟವಿಲ್ಲದ ತುಪ್ಪ ಬಳಕೆಯಿಂದಾಗಿ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ತುಪ್ಪ ಹೊತ್ತು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ.
ಈಗ ಟಿಟಿಡಿ ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್ ಗೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ವಿವಾದದ ನಂತರ ಕೆಎಂಎಫ್ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್ ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಚಿಂತನೆ ನಡೆದಿದೆ.
ಟಿಟಿಡಿ ಹಿಂದೆ ಹಿಂದೆ ವಾರಕ್ಕೆ ಮೂರು ಟ್ಯಾಂಕರ್ ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಪ್ರತಿನಿತ್ಯ ಒಂದೊಂದು ಟ್ಯಾಂಕರ್ ತುಪ್ಪ ತರಿಸಿಕೊಳ್ಳಲು 6 ತಿಂಗಳ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಟಿಟಿಡಿಗೆ ಕೆಎಂಎಫ್‌ನಿಂದ ಸರಕು ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿ ತಿರುಪತಿಗೆ ತರಿಸಿಕೊಳ್ಳುವ ಚಿಂತನೆ ನಡೆದಿದೆ. ಟ್ಯಾಂಕರ್ ಒಮ್ಮೆ ಲಾಕ್ ಆದರೆ ಟಿಟಿಡಿಯಲ್ಲಿಯೇ ಓಪನ್ ಮಾಡಲು ಅವಕಾಶ ಕಲ್ಪಿಸುವ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಒಟಿಪಿ ನಂಬರ್ ಹೇಳಿದ್ರೆ ಮಾತ್ರ ಟ್ಯಾಂಕರ್ ಓಪನ್ ಆಗುವಂತೆ ಮಾಡಲಾಗುತ್ತಿದೆ.