ಈ ವರ್ಷದಿಂದ ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಮಿನಿ ಮೈಸೂರು ದಸರಾ ಆಚರಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ, ತುಮಕೂರು ದಸರಾ ಪ್ರಧಾನ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಪ್ರಧಾನ ಸಮಿತಿ ಸಭೆ ನಡೆಸಿದ ಅವರು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 11 ಮತ್ತು 12 ರಂದು ಆಚರಿಸಲು ತೀರ್ಮಾನಿಸಲಾಗಿದೆ. ತುಮಕೂರು ದಸರಾ ಮೈಸೂರು ದಸರಾ ಮಾದರಿಯಲ್ಲಿರಬೇಕು. ಮಿನಿ ಮೈಸೂರು ದಸರಾವಾಗಬೇಕೆಂದು ಅಧಿಕಾರಿಗಳಿಗೆ ಹೇಳಿದ್ದಾರೆ.
ಈಗಾಗಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ, ಉಪ ಸಮಿತಿ ರಚಿಸಲಾಗಿದೆ. ವ್ಯವಸ್ಥಿತವಾಗಿ ರೂಪಿಸಲು ರಚಿಸಿರುವ ಸ್ವಾಗತ, ಆಹಾರ, ಸಾಂಸ್ಕೃತಿಕ, ಮೆರವಣಿಗೆ, ರೈತ ದಸರಾ ಮತ್ತು ವಸ್ತು ಪ್ರದರ್ಶನ, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ದೀಪಾಲಂಕಾರ, ಕ್ರೀಡೆ, ವೇದಿಕೆ ನಿರ್ಮಾಣ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳಿಗೂ ಸ್ಥಳೀಯ ಜನ ಪ್ರತಿನಿಧಿ, ದೇವಸ್ಥಾನದ ಅರ್ಚಕರು, ನಾಗರಿಕರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸಬೇಕು ಎಂದು ಸೂಚಿಸಿದ್ದಾರೆ.
ಎಚ್‌ಎಎಲ್, ಇಸ್ರೋ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿಅತ್ಯಾಧುನಿಕ ಹಾಗೂ ಆಕರ್ಷಕವಾದ ವಸ್ತುಪ್ರದರ್ಶನಗಳನ್ನು ಏರ್ಪಡಿಸಬೇಕು. ಭವಿಷ್ಯದ ಭಾರತ, ವಿವಿಧತೆಯಲ್ಲಿಏಕತೆಯ ಭಾರತ, ನಾಡು ನುಡಿ ಸಂಸ್ಕೃತಿ ಒಳಗೊಳ್ಳುವ ಕವಿಗೋಷ್ಠಿಯನ್ನು ಏರ್ಪಡಿಸಬೇಕು.
ಫ್ಯಾಷನ್ ಶೋ ಕಾರ್ಯಕ್ರಮದಲ್ಲಿಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಾಗವಹಿಸಬೇಕು. ಮಹಿಳಾ ದಸರಾ ಕಾರ್ಯಕ್ರಮದಲ್ಲಿ ನಗರದ ವಿವಿಧ ವಾರ್ಡ್ ಗಳಲ್ಲಿ ರಂಗೋಲಿ ಸ್ಪರ್ಧೆ, ದಸರಾ ಗೊಂಬೆ ಪ್ರದರ್ಶನ ಸ್ಪರ್ಧೆ ಏರ್ಪಡಿಸಬೇಕೆಂದು ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಗೆ ಸೂಚಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅನುಪಮ, ಮೆರವಣಿಗೆಯಲ್ಲಿ 3 ಆನೆಗಳು, ಹಳ್ಳಿಕಾರ್ ಎತ್ತು, ಕುದುರೆ, ವಿಂಟೇಜ್ ಕಾರು, ಜಿಲ್ಲೆಯ 70ಕ್ಕೂ ಅಧಿಕ ದೇವರ ಉತ್ಸವ ಮೂರ್ತಿಗಳು ಸೇರಿದಂತೆ 15 ಕಲಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದ್ದಾರೆ.