ಪಾಕಿಸ್ತಾನ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಜೋಶ್ ನಲ್ಲಿದ್ದ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಮಕಾಡೆ ಮಲಗಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಭಾರತ ತಂಡವು 280 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ್ದ ಭಾರತಕ್ಕೆ ಟಾಪ್ ಆರ್ಡರ್ ಬ್ಯಾಟ್ಸಮನ್ ಗಳ ವೈಫಲ್ಯ ಎದುರಾಯಿತು. ಆದರೆ, ರವಿಚಂದ್ರನ್ ಅಶ್ವಿನ್ (113) ಶತಕ ಗಳಿಸಿದರೆ, ರವೀಂದ್ರ ಜಡೇಜಾ (86) ಹಾಗೂ ಯಶಸ್ವಿ ಜೈಸ್ವಾಲ್ (56) ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮವಾಗಿ ಭಾರತ ತಂಡ ಪ್ರಥಮ ಇನಿಂಗ್ಸ್ ನಲ್ಲಿ 371 ರನ್ ಗಳಿಸಿತು.
ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡ ಕೇವಲ 149 ರನ್ ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಗಳಿಸಿದರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು. 227 ರನ್ ಗಳ ಪ್ರಥಮ ಇನಿಂಗ್ಸ್ ಮುನ್ನಡೆಯೊಂದಿಗೆ ಆಟ ಆರಂಭಿಸಿದ ಭಾರತ ಶುಭ್ಮನ್ ಗಿಲ್ (119) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (109) ಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಪರಿಣಾಮ ದ್ವಿತೀಯ ಇನಿಂಗ್ಸ್ ನಲ್ಲಿ 515 ರನ್ ಗಳ ಕಠಿಣ ಗುರಿ ಪಡೆದ ಬಾಂಗ್ಲಾದೇಶ ತಂಡ 234 ರನ್ ಗಳಿಗೆ ಸರ್ವಪತನ ಕಂಡು, 280 ರನ್ ಗಳ ಹೀನಾಯ ಸೋಲು ಕಂಡಿತು.
ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಸ್ಪಿನ್ ಮೋಡಿ ಮಾಡಿದ ರವಿಚಂದ್ರನ್ ಅಶ್ವಿನ್ 21 ಓವರ್ ಎಸೆದು 88 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಜಡೇಜಾ 3 ವಿಕೆಟ್, ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದು ಮಿಂಚಿದರು.