ಬೆಂಗಳೂರು: ವಿದ್ಯಾರ್ಥಿನಿಯರ ವಾಶ್ ರೂಮ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಈ ವಿದ್ಯಾರ್ಥಿ ಅದೇ ಕಾಲೇಜಿನ ಏಳನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಬಂಧಿತ ಕುಶಾಲ್ ಬಾಲಕಿಯರ ವಾಶ್ ರೂಮ್ ಗೆ ತೆರಳಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಶೌಚಾಲಯವೊಂದರಲ್ಲಿ ಬೀಗ ಹಾಕಿಕೊಂಡು, ರೆಕಾರ್ಡ್ ಮಾಡಲು ಪಕ್ಕದ ಶೌಚಾಲಯದ ಮೇಲೆ ತನ್ನ ಫೋನ್ ಹಿಡಿದಿದ್ದಾನೆ. ಆಗ ಅದು ರಿಂಗ್ ಆಗಿದೆ. ಕೂಡಲೇ ಅಲ್ಲಿದ್ದ ವಿದ್ಯಾರ್ಥಿನಿಯರು ಎಚ್ಚೆತ್ತುಕೊಂಡಿದ್ದಾರೆ. ಶೌಚಾಲಯವೊಂದರೊಳಗೆ ಕುಶಾಲ್ ನನ್ನು ಗಮನಿಸಿ ಹೊರಗೆ ಬರುವಂತೆ ಹೇಳಿದ್ದಾರೆ. ಆತ ನಿರಾಕರಿಸಿದ್ದಾನೆ. ಕೂಡಲೇ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ನಂತರ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ವಿದ್ಯಾರ್ಥಿಗಳು ಆರೋಪಿಗೆ ಥಳಿಸಿದ್ದರು ಎನ್ನಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.