ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಮೊದಲ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಶುಭಮನ್ ಗಿಲ್ ಈ ಶತಕದ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. 2ನೇ ಇನಿಂಗ್ಸ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ 161 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಶತಕದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅತ್ಯಧಿಕ ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಇದಕ್ಕೂ ಮುನ್ನ ದ್ವಿತೀಯ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯಲ್ಲಿ ಒಟ್ಟು 62 ಇನಿಂಗ್ಸ್ ಆಡಿರುವ ಕೊಹ್ಲಿ 4 ಶತಕ ಬಾರಿಸಿ ಈ ದಾಖಲೆ ಬರೆದಿದ್ದರು. ಈಗ 5ನೇ ಶತಕದೊಂದಿಗೆ ಶುಭ್ಮನ್ ಗಿಲ್ ಕೊಹ್ಲಿಯನ್ನು ಹಿಂದೆ ಹಾಕಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಇಲ್ಲಿಯವರೆಗೆ 48 ಇನಿಂಗ್ಸ್ ಆಡಿರುವ ಶುಭ್ಮನ್ ಗಿಲ್ 5 ಶತಕ ಸಿಡಿಸಿದ್ದಾರೆ. ಈ ಮೂಲಕ ಡಬ್ಲ್ಯೂಟಿಸಿ ಸರಣಿಯಲ್ಲಿ ಅತ್ಯಧಿಕ ಶತಕ ಬಾರಿಸಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಾಯಕ ರೋಹಿತ್ ಶರ್ಮಾ ಇದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 56 ಇನಿಂಗ್ಸ್ ಆಡಿರುವ ಹಿಟ್ ಮ್ಯಾನ್ ಒಟ್ಟು 9 ಶತಕ ಸಿಡಿಸಿ ಗಳನ್ನು ಸಿಡಿಸಿದ್ದಾರೆ. ಈ ಮೂಲಕ WTC ಇತಿಹಾಸದಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಅತ್ಯಧಿಕ ಶತಕ ಸಿಡಿಸಿರುವ ದಾಖಲೆ ಇಂಗ್ಲೆಂಡ್ನ ಜೋ ರೂಟ್ ಹೆಸರಿನಲ್ಲಿದೆ. 106 ಇನಿಂಗ್ಸ್ ಆಡಿರುವ ರೂಟ್ 16 ಶತಕಗಳೊಂದಿಗೆ ಒಟ್ಟು 4,973 ರನ್ ಗಳಿಸಿದ್ದಾರೆ.