ಖ್ಯಾತ ಒಡಿಶಾ ಗಾಯಕಿ ತಮ್ಮ 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಗಾಯಕಿ ರುಕ್ಸಾನಾ ಬಾನು ಅವರು ಹಠಾತ್ ನಿಧನರಾಗಿದ್ದಾರೆ. ಆದರೆ, ಅವರು ವಿಷ ಕುಡಿದು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ರುಕ್ಸಾನಾ ಬಾನು ಒಡಿಶಾದ ಪ್ರಸಿದ್ಧ ಸಂಬಲ್ಪುರಿ ಗಾಯಕಿಯಾಗಿದ್ದರು. ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರುಕ್ಸಾನಾ ಬಾನು ಸ್ಕ್ರಬ್ ಟೈಪೂಸ್ (Scrub Typhus)ಎಂಬ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ಅವರು ಯಾವುದೋ ಸೋಂಕಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ, ಕುಟುಂಬಸ್ಥರು ಮಾತ್ರ ವಿಷಪ್ರಾಶನದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ರುಕ್ಸಾನಾ ಬಾನುವಿನ ವಿರೋಧಿಯಾಗಿದ್ದ ಪಶ್ಚಿಮ ಒಡಿಶಾದ ಗಾಯಕಿ ವಿಷ ಹಾಕಿದ್ದಾರೆ ಎಂದು ರುಕ್ಸಾನಾ ತಾಯಿ ಆರೋಪಿಸಿದ್ದಾರೆ. ಆದರೆ ವಿಷವಿಕ್ಕಿದ ಗಾಯಕಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಇತ್ತೀಚೆಗೆ ರುಕ್ಸಾನಾಗೆ ಹಲವಾರು ಬೆದರಿಕೆ ಕರೆಗಳು ಬಂದಿದ್ದವು ಎಂದು ಪೋಷಕರು ಆರೋಪಿಸಿದ್ದಾರೆ.
ಸ್ವಲ್ಪ ದಿನಗಳ ಹಿಂದಷ್ಟೇ ರುಕ್ಸಾನಾ ಒಡಿಶಾದ ಬೊಲಂಗಿರ್‌ನಲ್ಲಿ ಶೂಟಿಂಗ್ ನಲ್ಲಿ ಇದ್ದ ಸಂದರ್ಭದಲ್ಲಿ ಜ್ಯೂಸ್ ಕುಡಿದಿದ್ದು, ನಂತರ ರುಕ್ಸಾನಾ ಅಸ್ವಸ್ಥರಾಗಿದ್ದರು. ಆಗ ಆಗಸ್ಟ್ 27ರಂದು ಭವಾನಿಪಟ್ನಾದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಬೊಲಿಂಗಿರ್ ನಲ್ಲಿರುವ ಭೀಮಾ ಭಾಯ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಯಾಗುತ್ತಿದೆ.