ಯಾದಗಿರಿ: ಖಾಸಗಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಯೋರ್ವ ಶಾಲೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಶಹಾಪುರ ನಗರದ ಖಾಸಗಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿ ಚೇತನ್ (16) ಸಾವನ್ನಪ್ಪಿದ್ದಾರೆ. ಶಹಾಪುರದ ಡಿಡಿಯು ಖಾಸಗಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಚೇತನ್ ಓದುತ್ತಿದ್ದ. ಅನಾರೋಗ್ಯ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಪೋಷಕರು, ವಿದ್ಯಾರ್ಥಿಯನ್ನು ಶಾಲೆಯ ವಸತಿ ನಿಲಯದಿಂದ ಮನೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಕರೆದುಕೊಂಡು ಹೋಗಿ ಪೋಷಕರು ಚೇತನ್ ಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಇವತ್ತು ಶಾಲೆಯಲ್ಲಿ ಕಿರು ಪರೀಕ್ಷೆ ಇದೆ ಎಂದು ವಿದ್ಯಾರ್ಥಿ ಶಾಲೆಗೆ ಬಂದಿದ್ದ. ಪರೀಕ್ಷೆ ಬರೆಯುವಾಗ ಸುಸ್ತಾಗಿ ವಾಂತಿ ಮಾಡಿಕೊಂಡಿದ್ದ. ಆದರೂ ಶಾಲೆಯಲ್ಲೇ ವಿಶ್ರಾಂತಿ ಪಡೆಯುವಂತೆ ಶಿಕ್ಷಕರು ಹೇಳಿದ್ದರು. ಆಗ 9ನೇ ತರಗತಿಯಲ್ಲಿ ಓದುತ್ತಿರುವ ಚೇತನ್ ಸಹೋದರಿ ಪವಿತ್ರಾಗೆ ಕರೆದು, ನನಗೆ ಹುಷಾರಿಲ್ಲದ ವಿಷಯವನ್ನು ಕರೆ ಮಾಡಿ ಪೋಷಕರಿಗೆ ತಿಳಿಸು ಎಂದಿದ್ದಾನೆ.
ಆದರೆ, ಮುಖ್ಯ ಶಿಕ್ಷಕರ ಅನುಮತಿ ಇಲ್ಲದೆ ಫೋನ್ ಕೊಡುವಂತಿಲ್ಲ. ಫೋನ್ ಕೊಡುವುದಕ್ಕೆ ಶಿಕ್ಷಕರು ನಿರ್ಲಕ್ಷ ವಹಿಸಿದ್ದಾರೆ. ಇದರಿಂದಾಗಿ ಬಾಲಕ ಶಾಲೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಮಕ್ಕಳೇ ಬೈಕ್ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. ಸದ್ಯ ಶಿಕ್ಷಕರ ನಿರ್ಲಕ್ಷ್ಯದಿಂದಲೇ ಚೇತನ್ ಸಾವನ್ನಪ್ಪಿದ್ದಾನೆಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.