ಮಂಗಳೂರು: ಬೇರೆಯವರಿಗೆ ಪಿತ್ತ ಜನಕಾಂಗ ದಾನ ಮಾಡಲು ಹೋಗಿ ಉಪನ್ಯಾಸಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸದಾ ಬೇರೆಯವರಿಗೆ ಸಹಾಯ ಮಾಡುವ ಮನೋಧರ್ಮ ಹೊಂದಿದ್ದ ಉಪನ್ಯಾಸಕಿ ತಮ್ಮ ಸಂಬಂಧಿಕರೊಬ್ಬರಿಗೆ ಪಿತ್ತ ಜನಕಾಂಗ ದಾನ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕರಂಗಲ್ಪಾಡಿ ನಿವಾಸಿಯಾಗಿರುವ ಲೆಕ್ಕಪರಿಶೋಧಕ ಚೇತನ್ ಕಾಮತ್ ಪತ್ನಿ ಅರ್ಚನಾ ಕಾಮತ್ (33) ಸಾವನ್ನಪ್ಪಿರುವ ದುರ್ದೈವಿ.
ಅವರು ಬಂಧುವೊಬ್ಬರಿಗೆ ತಮ್ಮ ಪಿತ್ತಜನಕಾಂಗ ದಾನ ಮಾಡಿದ್ದರು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅವರ ಪಿತ್ತಜನಕಾಂಗವನ್ನು ತೆಗೆದು, ಇನ್ನೊಬ್ಬರಿಗೆ ಕಸಿ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನಗಳ ವಿಶ್ರಾಂತಿ ನಂತರ ಉಪನ್ಯಾಸಕಿ ಮನೆಗೆ ಹಿಂತಿರುಗಿದ್ದರು.
ಆದರೆ, ಸೋಂಕಿಗೆ ತುತ್ತಾಗಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕರಂಗಲ್ಪಾಡಿಯಲ್ಲಿ ಅಂತಿಮ ವಿಧಿಗಳನ್ನು ಮುಗಿಸಿ ಅವರ ತವರೂರಾದ ಕುಂದಾಪುರದ ಕೋಟೆಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಟುಂಬಸ್ಥರು ಸೇರಿದಂತೆ ಇಡೀ ಕರ್ನಾಟಕ ಈ ಘಟನೆಗೆ ಕಂಬನಿ ಮಿಡಿದಿದೆ.