ಬೆಂಗಳೂರು: ಸರ್ಕಾರ ಅನಕ್ಷರಸ್ಥರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಹಲವರು ಅನಕ್ಷರಸ್ಥರಾಗಿಯೇ ಉಳಿದಿರುವುದು ನೋವಿನ ಸಂಗತಿ. ಅದರಲ್ಲಿಯೂ ಜನಪ್ರತಿನಿಧಿಗಳೇ ಅನಕ್ಷರಸ್ಥರಾಗಿರುವುದು ಆತಂಕ ಮೂಡಿಸುತ್ತಿದೆ. ಇಂತಹ ನಾಯಕರು ಯಾವ ರೀತಿ ಅಭಿವೃದ್ಧಿ ಕಾರ್ಯ ಮಾಡುತ್ತಾರೆ? ಯಾವ ರೀತಿ ಕಾನೂನು ಪಾಠ ಮಾಡುತ್ತಾರೆ? ಹೇಗೆ ರೀತಿ-ನೀತಿ, ನಿಯಮಗಳನ್ನು ಪಾಲಿಸುತ್ತಾರೆ? ಎಂಬುವುದೇ ಅರ್ಥವಾಗುತ್ತಿಲ್ಲ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಗ್ರಾಮ ಪಂಚಾಯಿತಿಗಳ ಒಟ್ಟು 94,775 ಜನ ಸದಸ್ಯರಲ್ಲಿ ಬರೋಬ್ಬರಿ 6,346 ಜನರಿಗೆ ಓದು ಬರಹ ಬರುವುದಿಲ್ಲ. ಅಂದರೆ, ಶೇ. 10ರಷ್ಟು ಸದಸ್ಯರಿಗೆ ಓದು, ಬರಹವೇ ಗೊತ್ತಿಲ್ಲ. ಹೀಗಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅನಕ್ಷರಸ್ಥ ಸದಸ್ಯರನ್ನು ಗುರುತಿಸಿ ಅವರಿಗೆ ಓದು, ಬರಹ, ಮತ್ತು ಲೆಕ್ಕಾಚಾರದಲ್ಲಿ ಕನಿಷ್ಠ ಸ್ವಾವಲಂಬನೆ ತರಲು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಾರ್ಯಕ್ರಮ ರೂಪಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ, ಈ ಯೋಜನೆಯ ಫಲವಾಗಿ 2,403 ಮಹಿಳಾ ಸದಸ್ಯರು ಹಾಗೂ 608 ಪುರುಷ ಸದಸ್ಯರು ಸೇರಿದಂತೆ 3,011 ಗ್ರಾಮ ಪಂಚಾಯಿತಿ ಸದಸ್ಯರು ತಕ್ಕ ಮಟ್ಟಿಗೆ ಓದು-ಬರಹ ಬಲ್ಲವರಾಗಿದ್ದಾರೆ ಎನ್ನಲಾಗಿದೆ. ಈಗ ಮತ್ತೆ ಎರಡನೇ ಹಂತದ ತರಬೇತಿ ಕಾರ‍್ಯಕ್ರಮ ಸೆ.1ರಿಂದ ಆರಂಭವಾಗಿದ್ದು, ಅಕ್ಟೋಬರ್ 20ರ ವರೆಗೆ ನಡೆಯಲಿದೆ. ಸಾಕ್ಷರತಾ ಕಾರ್ಯಕ್ರಮದಲ್ಲಿ ಕೆಲಸ ಮಾಡಿದವರು, ನಿವೃತ್ತ ಶಿಕ್ಷಕರು, ಗ್ರಾಮ ಪಂಚಾಯಿತಿ ಗ್ರಂಥಪಾಲಕರು, ವಯಸ್ಕರ ಕಲಿಕೆ-ಬೋಧನೆಯಲ್ಲಿ ಅನುಭವ ಇರುವವರನ್ನು ಸಾಕ್ಷರ ಸಮ್ಮಾನ ಕಾರ್ಯಕ್ರಮದಡಿ ಬೋಧಕರನ್ನಾಗಿ ಗುರುತಿಸಿ ಸಾಮಾನ್ಯ ಶಿಕ್ಷಣ ನೀಡುವ ಕಾರ್ಯ ಮಾಡಲಾಗುತ್ತಿದೆ.
ಅಲ್ಲದೇ, ಇದಕ್ಕಾಗಿ ಕನಿಷ್ಠ 100 ಗಂಟೆಗಳ ತರಬೇತಿಗೆ ಯೋಜನೆ ರೂಪಿಸಲಾಗಿದೆ. ದಿನಕ್ಕೆ 2 ಗಂಟೆಯಂತೆ ಒಟ್ಟು 50 ದಿನ ಓದು- ಬರಹ ಹೇಳಿಕೊಡುವ ಕಾರ್ಯ ರೂಪಿಸಲಾಗಿದೆ. ಅಲ್ಲದೇ, ಇದರೊಂದಿಗೆ ನಾಯಕತ್ವ, ಆರೋಗ್ಯ, ಪರಿಸರ, ಸಹಕಾರ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಸೇರಿದಂತೆ ಹಲವು ವಿಷಯಗಳ ಪಠ್ಯ ಬೋಧನೆ ಕೂಡ ನಡೆಯುತ್ತದೆ. ಈ ಮೂಲಕ ನಮ್ಮ ಜನಪ್ರತಿನಿಧಿಗಳನ್ನು ಸುಕ್ಷಿತರನ್ನು ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಗ್ರಾಪಂ ಸೇರಿದಂತೆ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ಶಿಕ್ಷಣ ಮಾನದಂಡ ಘೋಷಣೆ ಮಾಡುವಂತೆ ಹಲವರು ಮನವಿ ಮಾಡುತ್ತಲೇ ಇದ್ದಾರೆ.
ರಾಜ್ಯದಲ್ಲಿ ಕೊಪ್ಪಳ, ಬೆಳಗಾವಿ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಅನಕ್ಷರಸ್ಥ ಗ್ರಾಪಂ ಸದಸ್ಯರು ಇದ್ದಾರೆ. ಈ ಜಿಲ್ಲೆಗಳಲ್ಲಿ ಸುಮಾರು 600ಕ್ಕೂ ಅಧಿಕ ಅನಕ್ಷರಸ್ಥರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದನ್ನು ಗಮನಿಸಿದರೆ, ರಾಜ್ಯದಲ್ಲಿ ಉತ್ತರ ಕರ್ನಾಟಕ ಶಿಕ್ಷಣದಿಂದ ಹಿಂದೆ ಉಳಿದಿರುವುದು ಬಹಿರಂಗವಾಗುತ್ತಿದೆ.