ಅಹಮದಾಬಾದ್: ಅಧಿಕಾರ ದಾಹದ ಜನರಿಂದ ದೇಶ ಒಡೆಯುವ ಕಾರ್ಯ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಂಬಿಕೆ ಹೆಚ್ಚಾದಾಗ, ರಫ್ತು ಹೆಚ್ಚಾಗುತ್ತದೆ. ನಮ್ಮ ಮೇಲೆ ನಂಬಿಕೆ ಹೆಚ್ಚಾದ ಮೇಲೆ ವಿದೇಶಿ ಹೂಡಿಕೆದಾರರು ಹಣ ಹೂಡುತ್ತಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಇಡೀ ವಿಶ್ವದಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್ ಆಗಲು ಬಯಸುತ್ತಾನೆ. ತನ್ನ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ತೊಡಗಿದ್ದಾನೆ ಎಂದು ಹೇಳಿದ್ದಾರೆ.
ಆದರೆ, ನಕಾರಾತ್ಮಕತೆಯಿಂದ ತುಂಬಿರುವ ಕೆಲವರು ಎಲ್ಲ ನಿರ್ಧಾರಗಳ ವಿರುದ್ಧ ಮಾತನಾಡುತ್ತಿದ್ದಾರೆ. ಈ ಜನರು ದೇಶದ ಏಕತೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಅಧಿಕಾರದ ಹಸಿವಿನ ಈ ದುರಾಸೆಯ ಜನರು ಭಾರತವನ್ನು ತುಂಡು ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ನಕಾರಾತ್ಮಕತೆಯಿಂದ ತುಂಬಿರುವ ಜನರು ಭಾರತವನ್ನು ದೂಷಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ, ಅದಕ್ಕಾಗಿಯೇ ಈ ಜನರು ನಿರಂತರವಾಗಿ ಗುಜರಾತ್ ನ್ನು ಗುರಿಯಾಗಿಸುತ್ತಿದ್ದಾರೆ. ಹೀಗಾಗಿ ಅವರ ಬಗ್ಗೆ ಗುಜರಾತ್ ಎಚ್ಚರಿಕೆ ವಹಿಸಬೇಕು. ಸದ್ಯದ ಅವಧಿಯು “ದೇಶಕ್ಕೆ ಸುವರ್ಣ ಕಾಲ”. ಮುಂದಿನ 25 ವರ್ಷಗಳಲ್ಲಿ ನಾವು ಭಾರತವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಗುರಿಯಲ್ಲಿ ಗುಜರಾತ್ ನಿರ್ಣಾಯಕ ಪಾತ್ರ ವಹಿಸಲಿದೆ. ಗುಜರಾತ್ ಇಂದು ಬೃಹತ್ ಉತ್ಪಾದನಾ ಕೇಂದ್ರವಾಗುತ್ತಿದೆ. ಇದು ದೇಶದ ಅತ್ಯಂತ ಉತ್ತಮ ಸಂಪರ್ಕ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.