ಬೈಂದೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೈಂದೂರು ತಾಲೂಕು ಆಡಳಿತ ಮತ್ತು ಕುಂದಾಪುರ ತಾಲೂಕು ಆಡಳಿತ, ತ್ರಾಸಿ ಮತ್ತು ಮರವಂತೆ ಪಂಚಾಯಿತಿ ಸಹಕಾರದಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.

ಈ ವೇಳೆ ತಾಯಿಯ ಹೆಸರಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸಂವಿಧಾನ ಪೀಠಿಕೆ ಓದುವುದರ ಮೂಲಕ ಮಾನವ ಸರಪಳಿ ನಿರ್ಮಿಸಲಾಯಿತು. ಭಜನೆ, ಚಂಡೆವಾದನ, ಯಕ್ಷಗಾನ ಮತ್ತು ಟ್ಯಾಬ್ಲೋ ವೇಷ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ಗಡಿ ಭಾಗ ಶಿರೂರು ಗೇಟ್ ನಿಂದ ಉಡುಪಿ ಹೇಜಮಾಡಿ ತನಕ ಮಾನವ ಸರಪಳಿ ಮಾಡಲಾಯಿತು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಈ ವೇಳೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರಾಧನೆ ಮಾಡುವುದು, ಅನುಕರಣೆ ಮಾಡುವುದು ರೋಮಾಂಚನಕಾರಿ ಅನುಭವನ್ನು ಕೊಡುತ್ತದೆ. ಪ್ರಜಾಪ್ರಭುತ್ವದ ಸೌಂದರ್ಯ ಕಾಣಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ ಎಂದರು.
ಬೈಂದೂರು ತಾಲೂಕಿನ ತಹಶೀಲ್ದಾರ್ ಪ್ರದೀಪ್ ಮಾತನಾಡಿ,ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಬೈಂದೂರು ಇಒ ಭಾರತಿ ಮಾತನಾಡಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳ ಸಹಕಾರದಿಂದ ಶಿರೂರು ಗೇಟ್ ನಿಂದ ತ್ರಾಸಿ-ಮರವಂತೆ ಬೀಚ್ ತನಕ ಮಾನವ ಸರಪಳಿ ಕಾರ್ಯಕ್ರಮ ಮಾಡಲಾಯಿತು. ಎಲ್ಲರೂ ಸಂತಸದಿಂದ ಭಾಗವಹಿಸಿ ಯಶಸ್ವಿಗೊಳಿಸಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ತ್ರಾಸಿ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ, ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ, ಕುಂದಾಪುರ ಬಿಇಒ ಶೋಭಾ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷ ಸವಿತ್ರ ತೇಜ, ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ಮತ್ತು ಗುಪ್ತದಳ ಪಿಎಸ್‍ಐ ಬಸವರಾಜ ಕನಶೆಟ್ಟಿ, ಅರಣ್ಯ ಅಧಿಕಾರಿ ಸಂದೇಶ, ತಾಲೂಕು ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿ ಅರುಣ್, ಆರ್‍ಎಫ್‍ಒ ಜ್ಯೋತಿ ಸೇರಿದಂತೆ ಹಲವರು ಇದ್ದರು.