ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ನಾಗಮಂಗಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ವಿಪಕ್ಷಗಳ ಮಧ್ಯೆ ವಾಗ್ವಾದ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮಧ್ಯೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ನಾಗಮಂಗಲ ಗಲಭೆಯ ಹಿಂದೆ ನಿಷೇಧಿತ ಪಿಎಫ್ ಐ ಸಂಘಟನೆ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 76 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಪೈಕಿ A 44ಯೂಸೂಫ್, A 61ನಾಸೀರ್ ಪಿಎಫ್ ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎಂಬುವುದು ಬಿಜೆಪಿಯ ವಾದವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಗಳಸ್ಯ-ಕಂಠಸ್ಯ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಕರ್ನಾಟಕದ ಶಾಂತಿಯನ್ನು ಕದಡಲು ಸದಾ “ಸಿದ್ದ”ವಾಗಿವೆ. ಕೇರಳದ ನಿಷೇಧಿತ ಪಿಎಫ್ ಐ ಸಂಘಟನೆಯ ನಾಸೀರ್ ಮತ್ತು ಯೂಸೂಫ್ ಗೆ ಕರ್ನಾಟಕದ ನಾಗಮಂಗಲದಲ್ಲಿ ಏನು ಕೆಲಸ ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದೆ.
ಹಳೇ ಮೈಸೂರು ಭಾಗದಲ್ಲಿ ಕನ್ನಡಿಗರ ನೆಮ್ಮದಿ ಕೆಡಿಸಲು ದೊಡ್ಡದೊಂದು ಷಡ್ಯಂತ್ರ ರೂಪುಗೊಂಡಿರುವುದು ನಾಗಮಂಗಲದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಿದರೆ ಮಾತ್ರ ಕರ್ನಾಟಕದಲ್ಲಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಆಗ್ರಹಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಓಲೈಕೆ ರಾಜಕಾರಣವನ್ನು ಸ್ವಲ್ಪ ಬದಿಗಿಟ್ಟು, ಕನ್ನಡಿಗರ ಹಿತದೃಷ್ಟಿಯಿಂದ ನಾಗಮಂಗಲ ಗಲಭೆ ಪ್ರಕರಣವನ್ನು ಎನ್ಐಎಗೆ ವಹಿಸಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮನವಿ ಮಾಡಿದೆ.