ಬಿಗ್ ಬಾಸ್ ಕನ್ನಡ 11ರ ಸೀಸನ್ ಗೆ ಅಭಿಮಾನಿಗಳು ಹಲವಾರು ದಿನದಿಂದ ಕಾಯುತ್ತಿದ್ದಾರೆ. ಯಾವಾಗ ಆರಂಭವಾಗುತ್ತದೆ? ಈ ಬಾರಿಯ ಸ್ಪರ್ಧಿಗಳು ಯಾರು? ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಈ ಮಧ್ಯೆ ಕಿಚ್ಚ ಸುದೀಪ್ ನಿರೂಪಣೆ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಹೀಗಾಗಿ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ, ಈಗ ಎಲ್ಲರ ಆತಂಕಕ್ಕೆ ತೆರೆ ಬಿದ್ದಿದ್ದು, ಕಿಚ್ಚ ಸುದೀಪ್ ನಿರೂಪಣೆಯಲ್ಲೇ ಬಿಗ್ ಬಾಸ್ 11ರ ಸೀಸನ್ ನಿಮ್ಮ ಮನೆ ಬಾಗಿಲಿಗೆ ಬರಲು ಸಿದ್ಧವಾಗಿದೆ.
ಹೌದು. ಇದೇ ಸೆ. 29ರಿಂದ ಬಿಗ್ ಬಾಸ್ ಕನ್ನಡ ಸೀಸನ್ 11ರ ಕಾರ್ಯಕ್ರಮ ಆರಂಭವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ.. ಈ ಕುರಿತು ‘ಕಲರ್ಸ್ ಕನ್ನಡ’ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಫೋಟೋದಲ್ಲಿ ಕಿಚ್ಚ ಸುದೀಪ್ ಇದ್ದು, ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
ಕಿಚ್ಚ ಸುದೀಪ್ ಇಲ್ಲಿಯವರೆಗೆ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಹೀಗಾಗಿ ಅವರಿಲ್ಲದ ಬಿಗ್ ಬಾಸ್ ನೋಡುವುದು ಆಗುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನ ಕಿಚ್ಚ ಅವರ ನಿರೂಪಣೆಯನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಆತಂಕ ಶುರುವಾಗಿತ್ತು. ಸದ್ಯ ಅದಕ್ಕೆ ತೆರೆ ಬಿದ್ದಿದ್ದು, ಕಿಚ್ಚ ಮನೆಗೆ ಬರಲು ರಡಿ ಆಗುತ್ತಿದ್ದಾರೆ.
‘ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್ ಫಿನಾಲೆಯ ಸಂಚಿಕೆಯ ಮಧ್ಯೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹೊಸ ಪ್ರೋಮೋ ಬಿತ್ತರವಾಗಿದೆ. ಇದರಲ್ಲಿ ಸುದೀಪ್ ಡೈಲಾಗ್ ಹೇಳಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಪ್ರೋಮೋ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ, ಸೆಲೆಬ್ರಿಟಿ ಸೇರಿದಂತೆ ಹಲವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಲಿದ್ದಾರೆ. ಬಿಗ್ ಬಾಸ್ ಅಭಿಮಾನಿಗಳು ಸೆ. 29ಕ್ಕಾಗಿ ಕಾಯುತ್ತಿದ್ದಾರೆ.