ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಮರಳಿ ಆರ್ ಸಿಬಿ ಸೇರುತ್ತಾರೆ ಎಂಬ ಊಹಾಪೋಹ ಕಳೆದ ಹಲವು ದಿನಗಳಿಂದಲೂ ಚರ್ಚೆಯಾಗುತ್ತಲೇ ಇದೆ. ಈಗ ಈ ಸುದ್ದಿಗೆ ಜೀವ ತುಂಬುವಂತೆ ಮತ್ತೊಂದು ವಿಷಯ ವೈರಲ್ ಆಗುತ್ತಿದೆ.
ಕೆ.ಎಲ್ ರಾಹುಲ್ ಸದ್ಯ ಚೆನ್ನೈನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಲಕ್ನೋ ತಂಡದ ಮಾಲೀಕರನ್ನು ಭೇಟಿ ಮಾಡಿದ್ದರು. ಹೀಗಾಗಿ ಅಭಿಮಾನಿಗಳು ರಾಹುಲ್ ಲಕ್ನೋ ತಂಡದಲ್ಲಿಯೇ ಮುಂದುವರೆಯಲಿದ್ದಾರೆ ಎಂದು ಭಾವಿಸಿದ್ದರು. ಅಲ್ಲದೇ, ಲಕ್ನೋ ತಂಡದ ಮಾಲೀಕ ಕೂಡ ರಾಹುಲ್ ನಮ್ಮ ತಂಡದಲ್ಲಿಯೇ ಉಳಿಯಲಿದ್ದಾರೆ ಎಂಬ ಮಾತುಗಳನ್ನು ಆಡಿದ್ದರು. ಆದರೆ, ಈಗ ರಾಹುಲ್ ಮತ್ತೆ ಆರ್ ಸಿಬಿಯತ್ತ ಮನಸ್ಸು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ರಾಹುಲ್ ಫ್ರಾಂಚೈಸಿಯನ್ನು ಬದಲಾಯಿಸುವ ಕುರಿತು ರಾಹುಲ್ ಸುಳಿವು ನೀಡಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಭಿಮಾನಿಯೊಬ್ಬ, ‘ಆರ್ಸಿಬಿ ಎಂದರೆ ನನಗೆ ತುಂಬ ಇಷ್ಟ. ಬಹಳ ವರ್ಷಗಳಿಂದ ನಾನು ಆರ್ ಸಿಬಿಯ ದೊಡ್ಡ ಅಭಿಮಾನಿಯಾಗಿದ್ದೇನೆ. ಹೀಗಾಗಿ ನೀವು ಮತ್ತೊಮ್ಮೆ ಆರ್ಸಿಬಿ ಫ್ರಾಂಚೈಸಿಯಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾನೆ. ಆಗ ರಾಹುಲ್ ಈ ಮಾತಿಗೆ ಏನೂ ಪ್ರತಿಕ್ರಿಯೆ ನೀಡಲಿಲ್ಲ.
ಹೀಗಾಗಿ ಅಭಿಮಾನಿ, ಇದಕ್ಕೆ ಪ್ರತಿಕ್ರಿಯಿಸಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ನೀವು ಮತ್ತೊಮ್ಮೆ ಆರ್ ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನೋಡಲು ಬಯಸುತ್ತೇನೆ ಅಂದಿದ್ದಾನೆ. ಆಗ ರಾಹುಲ್, ನಾನು ಕೂಡ ಹಾಗೆ ಆಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಹೀಗಾಗಿ ರಾಹುಲ್ ಆರ್ ಸಿಬಿ ಕಡೆ ವಾಲಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.