ಮದ್ಯನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಜಾಮೀನಿನ ಮೇಲೆ ಹೊರ ಬಂದಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಹೀಗಾಗಿ ದೆಹಲಿಗೆ ಮತ್ತೊಬ್ಬರು ಸಿಎಂ ಬರಲಿದ್ದಾರೆ. 177 ದಿನಗಳ ಕಾಲ ಜೈಲಿನಲ್ಲಿದ್ದರೂ ತಮ್ಮ ಸ್ಥಾನದಿಂದ ಕೆಳಗಿಳಿಯದ ಕೇಜ್ರಿವಾಲ್ ಈಗ ಇದ್ದಕ್ಕಿದ್ದಂತೆ ಸಿಎಂ ಕುರ್ಚಿ ತ್ಯಜಿಸುತ್ತಿರುವುದಕ್ಕೆ ಹಲವರು ಹಲವಾರು ರೀತಿ ಮಾತನಾಡುತ್ತಿದ್ದಾರೆ.
ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹಲವು ಷರತ್ತುಗಳನ್ನು ನೀಡಿದೆ. ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ. ಯಾವುದೇ ಕಡತಗಳಿಗೂ ಸಹಿ ಹಾಕುವಂತಿಲ್ಲ. ಈ ಷರತ್ತುಗಳೇ ಅವರು ರಾಜೀನಾಮೆ ನೀಡಲು ಕಾರಣ ಎನ್ನಲಾಗುತ್ತಿದೆ.
ದೆಹಲಿ ವಿಧಾನಸಭೆಯ ಅಧಿವೇಶನವನ್ನು ಕೊನೆಯದಾಗಿ ಏಪ್ರಿಲ್ 8 ರಂದು ನಡೆಸಲಾಗಿತ್ತು. ಅಕ್ಟೋಬರ್ 8 ರೊಳಗೆ 6 ತಿಂಗಳ ನಂತರ ಅಧಿವೇಶನ ಕರೆಯಬೇಕಿದೆ. ಇಲ್ಲದಿದ್ದರೆ ಸರ್ಕಾರ ವಿಧಾನಸಭೆ ವಿಸರ್ಜಿಸಬೇಕಿತ್ತು. ಒಂದು ವೇಳೆ ವಿಧಾನಸಭೆ ವಿಸರ್ಜನೆಯಾದರೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ.
ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳ ಅಡಿಯಲ್ಲಿ ವಿಧಾನಸಭೆ ಅಧಿವೇಶನ ಕರೆಯುವುದು ಸುಲಭವಲ್ಲ. ಸಂವಿಧಾನದ 174ನೇ ವಿಧಿಯಲ್ಲಿ ರಾಜ್ಯಪಾಲರು/ಲೆಫ್ಟಿನೆಂಟ್ ಗವರ್ನರ್‌ಗೆ ಅಧಿವೇಶನವನ್ನು ಕರೆಯುವ ಮತ್ತು ವಿಸರ್ಜಿಸುವ ಅಧಿಕಾರ ನೀಡಲಾಗಿದೆ.
ಸಚಿವ ಸಂಪುಟದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈ ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿ ಮಾತ್ರ ಸಂಪುಟ ಸಭೆಯನ್ನು ಮುನ್ನಡೆಸಬಹುದು. ಆದರೆ ಕೇಜ್ರಿವಾಲ್‌ಗೆ ವಿಧಿಸಲಾಗಿರುವ ಜಾಮೀನು ಷರತ್ತುಗಳಿಂದ ಇದು ಸುಲಭವಲ್ಲ. ಕೇಜ್ರಿವಾಲ್ ಸಂಪುಟ ಸಭೆಯ ಶಿಫಾರಸನ್ನು ಲೆಫ್ಟಿನೆಂಟ್ ಗವರ್ನರ್ ಗೆ ಕಳುಹಿಸುವಂತಿಲ್ಲ. ಅಕ್ಟೋಬರ್ 8 ರಂದು ರಾಷ್ಟ್ರಪತಿ ಆಳ್ವಿಕೆ ಹೇರಿದ್ದರೆ ದೆಹಲಿಯ ಚುನಾವಣಾ ದಿನಾಂಕ ವಿಸ್ತರಿಸಬಹುದಿತ್ತು.
ಪ್ರಸ್ತುತ, ಫೆಬ್ರವರಿ 2025 ರಲ್ಲಿ ವಿಧಾನಸಭಾ ಚುನಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿವಿಧಾನಸಭೆ ವಿಸರ್ಜನೆಯಾದ 6 ವರ್ಷಗಳ ನಂತರ ವಿಧಾನಸಭೆ ಚುನಾವಣೆ ನಡೆದಿದೆ. ಹೀಗಾಗಿ ಬೇರೊಬ್ಬರನ್ನು ಸಿಎಂ ಮಾಡುವ ಮೂಲಕ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ಆಪ್ ಮುಂದಾಗಿದೆ.