ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿತು. ಆದರೆ, ಸಭೆಯ ನಂತರ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೆಹಲಿಗೆ ದೌಡಾಯಿಸಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಸದ್ಯದ ಮಾಹಿತಿಯಂತೆ ಅವರು ಕುಟುಂಬದೊಂದಿಗೆ ಖಾಸಗಿ ಉದ್ಧೇಶಕ್ಕಾಗಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ, ದೆಹಲಿಯಿಂದ ಮರಳಿ ಬರುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯಕ್ಕೆ ಅಂತ್ಯ ಹಾಡಲು ಆರೆಸ್ಸೆಸ್ ಪ್ರಮುಖರ ಜೊತೆಗೆ ಬೆಂಗಳೂರಿನಲ್ಲಿ ಗುರುವಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಆರ್ ಎಸ್ ಎಸ್ ನ ತಿಪ್ಪೇಸ್ವಾಮಿ, ಮುಕುಂದ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿಯ ಅತೃಪ್ತರನ್ನು ಆಹ್ವಾನಿಸಲಾಗಿತ್ತು.
ಈ ಸಭೆಯಲ್ಲಿಯೂ ಭಿನ್ನಮತ ಸ್ಫೋಟಗೊಂಡಿತ್ತು. ಸಂಘದ ಹಿರಿಯರ ಮುಂದೆ ವಿಜಯೇಂದ್ರ ವಿರೋಧಿ ಬಣ ಹಲವು ದೂರನ್ನು ನೀಡಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅಸಮಾಧಾನವನ್ನು ಹೊರ ಹಾಕಿತ್ತು. ರಾಜ್ಯದಲ್ಲಿ ಕುಟುಂಬಕ್ಕೆ ಮಣೆ ಹಾಕಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ವಿಜಯೇಂದ್ರ ಹಾಗೂ ಅವರ ಆಪ್ತರು ತಮ್ಮ ಸಮರ್ಥನೆಯನ್ನು ನೀಡಿದ್ದರು.
ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಮುಲಾಮು ಹಾಕುವ ನಿಟ್ಟಿನಲ್ಲಿ ಸಂಘವೂ ಕೆಲವೊಂದು ಸೂಚನೆಗಳನ್ನು ಎರಡು ಬಣಕ್ಕೂ ನೀಡಿತ್ತು. ಪಕ್ಷ ಸಂಘಟನೆಗೆ ಒತ್ತು ನೀಡುವುದರ ಜೊತೆಗೆ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿತ್ತು. ಈ ಸಭೆಯ ನಂತರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ದೆಹಲಿಯಲ್ಲಿ ಬಿ.ವೈ. ವಿಜಯೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಈ ಪ್ರವಾಸ ಕೂಡ ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.