ನಾಗಮಂಗಲ: ದೇಶದ್ರೋಹಿಗಳನ್ನು ಮಟ್ಟ ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಂಗ್ ಮಚ್ಚು ಹಿಡಿದು ಇಂದು ರಸ್ತೆಯಲ್ಲಿ ಓಡಾಡಿರುವ ಕಿಡಿಗೇಡಿಗಳು ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳ ಮನೆಗಳಿಗೂ ನುಗ್ಗುವ ಕಾಲ ದೂರವಿಲ್ಲ. ನಿಮ್ಮ 420 ರಾಜಕಾರಣ ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿರುವ ದೇಶದ್ರೋಹಿಗಳನ್ನು ಮಟ್ಟಹಾಕಿ ಎಂದು ಹೇಳಿದ್ದಾರೆ.
ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು, ಬಾಟಲ್ ತೂರಿ ಪೆಟ್ರೋಲ್ ಬಾಂಬ್ ಎಸೆದಿರುವುದು, ತಲವಾರ್ ತಂದು ರಸ್ತೆಯಲ್ಲಿ ಹಲ್ಲೆ ನಡೆಸಲು ಯತ್ನ ನಡೆಸಿರುವುದು ದೇಶದ್ರೋಹಿಗಳ ಪೂರ್ವನಿಯೋಜಿತ ಕೃತ್ಯ. ಆದರೂ ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿಕೊಂಡು ಎಲ್ಲವನ್ನೂ ನೋಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರಗೋಡಿನಲ್ಲಿ ಹಿಂದೆ ಹನುಮ ಧ್ವಜ ಇಳಿಸುವ ಕೆಲಸ ಮಾಡಿದರು. ದೇಶದ್ರೋಹಿಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ಹೆಸರಾಗಿರುವ ಮಂಡ್ಯ ಜಿಲ್ಲೆ ಕೋಮು ಗಲಭೆ ವಿಚಾರದಲ್ಲಿ ರಾಷ್ಟ್ರದೆಲ್ಲೆಡೆ ಚರ್ಚೆಯಾಗುತ್ತಿರುವುದು ದುರಾದೃಷ್ಟ. ಆಡಳಿತ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಈರೀತಿ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ದೇಶದ್ರೋಹಿಗಳ ಅಟ್ಟಹಾಸವನ್ನು ಸರ್ಕಾರ ಮಟ್ಟಹಾಕಬೇಕು. ಅಲ್ಲದೇ, ಗಲಭೆಯಿಂದ ಹಾನಿಯಾದ ಸಂಪೂರ್ಣ ನಷ್ಟವನ್ನು ಸಿಎಂ ಹಾಗೂ ಸಚಿವರು ಭರಿಸಬೇಕು ಎಂದು ಆಕ್ರೋಶ ವ್ಯಕ್ಪಡಿಸಿದ್ದಾರೆ.