ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲಲ್ಲಿ ಉಂಟಾಗಿರುವ ಕೋಮುಗಲಭೆ ತೀವ್ರ ಸ್ವರೂಪ ಪಡೆದಿದೆ. ಗಣೇಶ ಉತ್ಸವದ ಮೆರವಣಿಗೆ ಸಂದರ್ಭದಲ್ಲಿ ಕೆಲವು ಜನರು ಕಲ್ಲು ತೂರಾಟ ನಡೆಸಿರುವ ಘಟನೆ ಈಗ ರಾಜಕೀಯ ಸ್ವರೂಪ ಪಡೆದಿದೆ. ಹಿಂದೂ ಕಾರ್ಯಕರ್ತರು ಕಿಡಿಕಾರುತ್ತಿದ್ದಾರೆ. ಈಗ ಈ ಸ್ಥಳಕ್ಕೆ ತೆರಳಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ ಹೇರಲಾಗಿದೆ.
ಘಟನೆಯ ನಂತರ ಮಚ್ಚು, ಲಾಂಗ್ ತೋರಿಸಿ, ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದರು. ಈ ಕೃತ್ಯಕ್ಕೆ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರವಾಗಿ ಕಿಡಿಕಾರಿದ್ದರು. ಅಲ್ಲದೇ, ನಾಗಮಂಗಲಕ್ಕೆ ಬರುವುದಾಗಿ ಹೇಳಿದ್ದರು. ಆದರೆ, ಅವರಿಗೆ ನಾಗಮಂಗಲಕ್ಕೆ ಬಾರದಂತೆ ಪೊಲೀಸರು ಸೂಚಿಸಿದ್ದಾರೆ.
ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಗಣಪತಿ ಮಂಟಪ ಇದ್ದ ಬದ್ರಿಕೊಪ್ಪಿನಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನೂ ಬಂಧನದ ಭೀತಿಯಲ್ಲಿರುವ ಯುವಕರು ಗ್ರಾಮ ತೊರೆದಿದ್ದಾರೆ. ಹೀಗಾಗಿ, ಬದ್ರಿಕೊಪ್ಪಲು ಗ್ರಾಮ ಬಿಕೋ ಎನ್ನುತ್ತಿದೆ. ಈ ಕೋಮುಗಲಭೆಯಲ್ಲಿ 20ಕ್ಕೂ ಅಧಿಕ ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು.
ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂದೂಗಳ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗುತ್ತ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದಂತೆ ಮುಸ್ಲಿಂರ ಗುಂಪು ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಗಲಾಟೆಯೆಬ್ಬಿಸಿದ್ದರು. ಈ ಕುರಿತು 150 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, 52 ಜನರನ್ನು ಪೊಲೀಸರು ಬಂಧಿಸಿದ್ದಾರೆ.