ತುಮಕೂರು: ಗೃಹ ಲಕ್ಷ್ಮೀಯರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮೀಯರಲ್ಲ ಎನ್ನಲಾಗುತ್ತಿದೆ.
ಆದಾಯ ತೆರಿಗೆ ಹಾಗೂ ಜಿಎಸ್ ಟಿ ಪಾವತಿದಾರ ಮಹಿಳೆಯರು ಕೂಡ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿದ್ದಾರೆ. ಅಂಥವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಪಟ್ಟಿಯಿಂದ ಕೈ ಬಿಡಲಾಗಿದೆ. ಹೀಗಾಗಿ ಸುಮಾರು 2 ಲಕ್ಷ ಮಹಿಳೆಯರು ಯೋಜನೆಯಿಂದ ಹಿಂದೆ ಸರಿದಿದ್ದಾರೆ.
ಸದ್ಯ ಕಳೆದ ಎರಡ್ಮೂರು ತಿಂಗಳುಗಳಿಂದ ಗೃಹಲಕ್ಷ್ಮೀ ಖಾತೆಗೆ ಹಣ ಬಂದಿಲ್ಲ. ಹಲವರ ಖಾತೆಗಳನ್ನು ಈಗಾಗಲೇ ಕೈ ಬಿಡಲಾಗಿದ್ದು, ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯಕ್ಕೆ ತೆರಳಿ ವಿಚಾರಿಸಿದಾಗ ಯಾವ ಕಾರಣಕ್ಕೆ ಸ್ಥಗಿತವಾಗಿದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ.
ಈ ಸಂದರ್ಭದಲ್ಲಿ ಆಧಾರ್ ಲಿಂಕ್, ಬ್ಯಾಂಕ್ ಖಾತೆ ಜೋಡಣೆ ಮೊದಲಾದ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಕಾರಣದಿಂದ ಯೋಜನೆ ಹಣ ಬಾರದಿದ್ದರೂ ಅಪ್ಡೇಟ್ ಮಾಡಿದರೆ, ಖಾತೆಗೆ ಹಣ ಜಮೆ ಆಗಲಿದೆ. ಸದ್ಯದ ಮಾಹಿತಿಯಂತೆ ರಾಜ್ಯದಲ್ಲಿ 1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಲ್ಲಿ ಸುಮಾರು 2 ಲಕ್ಷ ಮಹಿಳೆಯರನ್ನು ಐಟಿ, ಜಿಎಸ್‌ಟಿ ಪಾವತಿ ಕಾರಣದಿಂದ ಯೋಜನೆಯಿಂದ ಕೈ ಬಿಡಲಾಗಿದೆ. ಆದರೂ ಹಲವರು ಹಣ ಬರುತ್ತಿಲ್ಲವೆಂದು ಅಲೆಯುತ್ತಿದ್ದಾರೆ.
ಹೀಗಾಗಿ ಜಿಎಸ್‌ಟಿ, ಐಟಿ ಪಾವತಿದಾರರಾಗಿರುವುದರಿಂದ ನಿಮಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಸಿಗುವುದಿಲ್ಲಎಂದು ಅಧಿಕೃತವಾಗಿಯೇ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶ ನೀಡಿದ್ದಾರೆ.
ಹಿಂದೆ ಸಿಎಂ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ಲಭಿಸಲಿದೆ ಎಂದಿದ್ದರು. ಸದ್ಯ ‘ಷರತ್ತುಬದ್ಧ ಗ್ಯಾರಂಟಿ’ ನೀಡುತ್ತಿದ್ದಾರೆಂದು ಹಲವರು ಆರೋಪಿಸುತ್ತಿದ್ದಾರೆ.