ಬೆಂಗಳೂರು: ಬಿಜೆಪಿ ನಾಯಕರಿಗೆ ಆರೆಸ್ಸೆಸ್ ಒಗ್ಗಟ್ಟಿನ ಹಾಗೂ ಸಮನ್ವಯತೆಯ ಪಾಠ ಮಾಡಿದೆ.
ಸೆ. 12ರಂದು ಬಿಜೆಪಿ ಮತ್ತು ಆರೆಸ್ಸೆಸ್ ಸಮನ್ವಯ ಸಭೆ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದ ಶಾಸಕರು ಸಭೆಯ ನಂತರ ತಣ್ಣಗಾಗಿರುವಂತೆ ಕಾಣುತ್ತಿದೆ. ಕೆಲವು ಸಮಯದಿಂದ ಇದ್ದ ಮುನಿಸು, ಸಮನ್ವಯದ ಕೊರತೆ ಎಲ್ಲವೂ ಸ್ವಲ್ಪ ಪರಿಹಾರವಾಗಿದೆ. ರಾಜ್ಯ ನಾಯಕತ್ವದ ವಿರುದ್ಧ ಮುನಿದಿದ್ದವರನ್ನು ಕರೆದು ಮಾತುಕತೆ ಮಾಡಲಾಗಿದ್ದು, ದೊಡ್ಡ ಮಟ್ಟದಲ್ಲಿ ಕುದಿಯುತ್ತಿದ್ದ ಅಸಮಾಧಾನವನ್ನು ತಕ್ಕಮಟ್ಟಿಗೆ ಶಮನ ಮಾಡಲು ಇಂದಿನ ಸಭೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯ ಇರುತ್ತದೆ. ಎಲ್ಲರೂ ಎಲ್ಲವನ್ನೂ ಮರೆತು ಮುಂದೆ ಹೋಗಬೇಕು. ಇನ್ನು ಮುಂದೆ ಯಾರೂ ಕೂಡಾ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಪಕ್ಷದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ರಾಜ್ಯ ಕೋರ್ ಕಮಿಟಿ ಪುನರ್ ರಚನೆ ಬಗ್ಗೆ ಕುಳಿತು ಚರ್ಚೆ ಆಗಲಿ. ಸಂಘಟಿತ ಹೋರಾಟ ಆಗಬೇಕು. ಮತ್ತೊಂದು ಪಾದಯಾತ್ರೆ ಪಕ್ಷದ ವೇದಿಕೆಯಲ್ಲೇ ಆಗಬೇಕು ಆಂತರಿಕ ವಿಚಾರ ಬಹಿರಂಗವಾಗಿ ಚರ್ಚೆ ಮಾಡುವಂತಿಲ್ಲ ಎಂದು ಬುದ್ಧಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.
ವಾಲ್ಮೀಕಿ ಅಭಿವೃದ್ದಿ ನಿಗಮದ ಅವ್ಯವಹಾರ ವಿರುದ್ಧ ಹೋರಾಟದಲ್ಲಿ ಉದ್ದೇಶಿತ ಬಳ್ಳಾರಿ ಪಾದಯಾತ್ರೆಯನ್ನು ಪಕ್ಷದ ವೇದಿಕೆಯ ಮೂಲಕವೇ ನಡೆಸಲು ಇಂದಿನ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಇದಕ್ಕೆ ಯತ್ನಾಳ್, ಜಾರಕಿಹೊಳಿ ಕೂಡಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಆರೆಸ್ಸೆಸ್ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ ಸಿಂಹ, ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು ಎನ್ನಲಾಗಿದೆ.